‘ಹಲೋ... ಮಿನಿಷ್ಟ್ರು ಸಾಹೇಬ್ರಿಗೆ ನಮಸ್ಕಾರ. ನಾನ್ಸಾ ಟಿ.ವಿ ರಿಪೋಟ್ರು ತೆಪರೇಸಿ ಮಾತಾಡ್ತಿರೋದು, ಕೊರೊನಾ ಕಂಟ್ರೋಲ್ ಎಲ್ಲಿಗೆ ಬಂತು ಸಾ...’
‘ಸತ್ತೋರಿಗೆ ಫ್ರೀ ಆಂಬುಲೆನ್ಸ್ ಮಾಡೀವಿ, ನೂರು ಹೆಣ ಒಟ್ಟಿಗೇ ಸುಡೋ ಅಷ್ಟು ದೊಡ್ಡ ಸ್ಮಶಾನ ಮಾಡೀವಿ, ಕಟ್ಟಿಗೆ ಫ್ರೀ ಕೊಡ್ತೀವಿ... ಸ್ಮಶಾನಕ್ಕೆ ಬಂದೋರಿಗೆ ತಿಂಡಿ, ಚಾ ವ್ಯವಸ್ಥೆ ಮಾಡೀವಿ...’
‘ಅದು ಸತ್ತೋರಿಗಾತು, ಬದುಕಿರೋರಿಗೆ ಏನ್ಮಾಡಿದೀರಿ?’
‘ಬದುಕಿರೋರಿಗೆ ಲಾಕ್‍ಡೌನ್ ಮಾಡೀವಿ, ಆಸ್ಪತ್ರಿಗೆ ಬಂದರೆ ಬೆಡ್ಡು, ಆಕ್ಸಿಜನ್ನು ನಮ್ ಕೈಲಾದಷ್ಟು ಕೊಡುಸ್ತಿದೀವಿ...’
‘ಆದ್ರೂ ಜನ ಸಾಯ್ತದಾರಲ್ಲ ಸಾ?’
‘ಸಾಯೋರಿಗೆ ನಾ ಏನ್ಮಾಡೋದೈತಪ? ಎದಿ ಒಡೀಬಾರದು. ಅವರಿಗೆ ಪಂಪ್ ಹೊಡೆದು ಧೈರ್ಯ ತುಂಬಾಕೆ ನಮ್ಮ ಕೈಯಾಗೆ ಆಗಲ್ಲ. ಮೊದ್ಲು ನಾವು ಉಳಿದ್ರೆ ಸಾಕಾಗೇತಿ...’
‘ಅಲ್ಲ ನೀವೇ ಹಿಂಗಂದ್ರೆ ಹೆಂಗೆ ಸಾ... ಬದುಕಿರೋರಿಗೆ ಲಸಿಕೆ ಕೊಡ್ರಿ ಅಂದ್ರೆ ಸತ್ತೋರ ಸುಡಾಕೆ ಕಟ್ಟಿಗೆ ಕೊಡ್ತೀವಿ ಅಂತೀರಲ್ಲ?’
‘ಲಸಿಕೆ ನಮ್ ಕೈಯಾಗಿಲ್ಲ, ಸೆಂಟ್ರಲ್‍ನೋರು ಕೊಡಬೇಕು...
‘ಅಲ್ಲೀತಂಕ ಜನ ಸಾಯ್ತಾನೇ ಇರಬೇಕಾ? ಲಾಕ್‍ಡೌನ್ ಮಾಡ್ತೀರಿ, ನಡಕಂಡು ಓಡಾಡ್ರಿ ಅಂತೀರಿ. ಅರ್ಜೆಂಟ್ ಕೆಲ್ಸಕ್ಕೆ ಅಂತ ಹೊರಗೆ ಬಂದ್ರೆ ಪೊಲೀಸ್ರ ಕೈಯಾಗ ಹೊಡೆಸ್ತೀರಿ... ಒದ್ರೆ ಕೊರೊನಾ ಹೋಕ್ಕತಾ?’
‘ಲೇ ತಮಾ, ಟೀವಿ ರಿಪೋಟ್ರ... ಒಳ್ಳೆ ವಿರೋಧ ಪಕ್ಷದೋರಂಗೆ ಮಾತಾಡ್ತಿಯಲ್ಲೋ... ಎಲ್ಲ ಕಡಿ ಜನ ಬೇಕಾಬಿಟ್ಟಿ ಓಡಾಡ್ತಾರೆ ಲಾಕ್‍ಡೌನ್ ಮಾಡ್ರಿ ಅನ್ನೋರೂ ನೀವಾ, ಬೀದಿಗೆ ಬಂದ ಜನಾನ ಒದ್ರೆ, ಒದೆಯೋಕೆ ನಿಮಗೆ ಅಧಿಕಾರ ಕೊಟ್ಟೋರ್‍ಯಾರು ಅಂತ ಕೇಳೋರೂ ನೀವಾ... ಈ ಎಲ್ಲ ಸಮಸ್ಯೆಗೆ ಒಂದು ಪರಿಹಾರ ಐತಿ, ಮಾಡ್ತೀರೇನು?’
‘ಹೇಳ್ರಿ ಅದೇನ್ ನೋಡೋಣು...’
‘ನಿಮ್ ಮೈಕ್ ನಮ್ ಕೈಯಾಗೆ ಕೊಡ್ರಿ, ನಮ್ ಸರ್ಕಾರನ ನಿಮ್ ಕೈಯಾಗ ಕೊಡ್ತೀವಿ, ನೀವಾ ಸರ್ಕಾರ ನಡೆಸ್ರಿ... ಒಪ್ಪಿಗೀನಾ?’
ತೆಪರೇಸಿ ಪಿಟಿಕ್ಕೆನ್ನಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.