ಬೇರೆ ದೇಶಗಳಿಂದ ಕೊಡುಗೆಯಾಗಿ ಬಂದ ಆಕ್ಸಿಜನ್ ಸಿಲಿಂಡರ್‌ಗಳನ್ನು ನೋಡುತ್ತಿದ್ದ ನಮ್ಮ ವಿದೇಶಾಂಗ ಸಚಿವರ ಹಾಟ್‍ಲೈನ್‍ಗೆ ಚೀನಾದಿಂದ ಫೋನ್ ಬಂತು. ಈ ಸಮಯದಲ್ಲಿ ಚೀನಾದ ಕಡೆಯಿಂದ ಫೋನ್ ಬಂದಿರುವುದು ನಮ್ಮ ಸಚಿವರಿಗೆ ಸ್ವಲ್ಪ ಅಚ್ಚರಿ ತಂದಿತು.
ಉಚಿತವಾಗಿ ಕೊರೊನಾ ವೈರಸ್ ಕಳುಹಿಸಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಚೀನಾವು ಆಕ್ಸಿಜನ್ ಉಡುಗೊರೆ ಕಳುಹಿಸಲು ನಿರ್ಧರಿಸಿರಬಹುದು ಎಂದುಕೊಂಡು ರಿಸೀವರ್ ಎತ್ತಿದರು.
ಅತ್ತ ಕಡೆಯಿಂದ ಮಾತಾಡಿದ ಚೀನೀ ವಿದೇಶಾಂಗ ಸಚಿವರು ‘ನಮಸ್ತೆ ಭಾಯ್, ಎರಡೂ ದೇಶಗಳ ಗಡಿಯಲ್ಲಿ ಲೈನ್‍ಗಳನ್ನು ಮಾರ್ಕ್ ಮಾಡ್ಬೇಕು. ನಿಮ್ಕಡೆಯಿಂದ ಒಂದಷ್ಟು ಸರ್ವೇಯರ್‌ಗಳನ್ನು ದೋಕ್ಲಾಮ್‍ಗೆ ಕಳುಹಿಸಿ. ನಮ್ಮವರನ್ನೂ ನಾಳೆ ಅಲ್ಲಿಗೆ ಕಳಿಸ್ತಿದೀನಿ’ ಎನ್ನುತ್ತಾ ಲೈನ್ ಕಟ್ ಮಾಡಿದರು.
ಬಾರ್ಡರ್ ಸೆಕ್ಯೂರಿಟಿ ಫೋರ್ಸಿನವರನ್ನು ಅಲರ್ಟ್ ಮಾಡಿ, ಆರ್ಮಿಯವರಿಗೂ ಸಂದೇಶ ಕಳುಹಿಸಿ, ಸರ್ವೇಯರ್‌ಗಳ ದಂಡನ್ನು ಚೀನಾ ಬಾರ್ಡರ್‌ಗೆ ನಿಯೋಜಿಸುವ ವ್ಯವಸ್ಥೆಯನ್ನು ಸಚಿವರು ಮಾಡಿದರು. ಮರುದಿನ ನಮ್ಮವರು ಗಡಿಯತ್ತ ತೆರಳುವಷ್ಟರಲ್ಲಿ ಹಗ್ಗ, ಸರಪಳಿ, ಬಾಂದಿನ ಕಲ್ಲು, ಪೇಯಿಂಟ್ ಡಬ್ಬಿ, ಮ್ಯಾಪುಗಳನ್ನು ಹಿಡಿದು ಚೀನೀ ಸರ್ವೇಯರ್‌ಗಳು ಕಾಯುತ್ತಿದ್ದರು.
ಅಲ್ಲಿನ ಮುಖ್ಯಸ್ಥರು ಬಿಳಿ ಬಾವುಟದೊಂದಿಗೆ ಇತ್ತ ಕಡೆ ಬಂದು ನಮಸ್ಕರಿಸಿದರು. ‘ನಿಮ್ಕಡೆ ಕೊರೊನಾ ವೈರಸ್‍ಗಳ ಕಾಟ ತುಂಬಾ ಜಾಸ್ತಿಯಿದೆ ಅಂತ ಗೊತ್ತಾಯ್ತು. ಅವು ಗಡಿ ದಾಟಿ ನಮ್ಕಡೆ ಬಂದರೆ ಗುರುತಿಸಲು ಈ ವ್ಯವಸ್ಥೆ’ ಅಂದರು.
‘ವೈರಸ್ ನೋಡಿದ ಕೂಡ್ಲೇ ನಮ್ಕಡೇದು ಅಂತ ಹೇಗೆ ಗುರುತಿಸ್ತೀರಿ?’ ಎಂದು ನಮ್ಮ ಸರ್ವೇಯರ್ ಪ್ರಶ್ನಿಸಿದರು. ‘ಮೊದಲು ಕರ್ಫ್ಯೂ ಹಾಕ್ತೀವಿ. ವೈರಸ್‍ಗಳು ಹೆದರಿಕೊಂಡು ಬಚ್ಚಿಟ್ಕೊಳತ್ವೆ. ಪೊಲೀಸರ ಲಾಠಿ ಕಂಡರೆ ಬಾಲ ಮುದುರಿಕೊಳ್ಳತ್ವೆ’ ಅಂದ್ರು ಚೀನೀ ಮುಖ್ಯಸ್ಥರು.
‘ಗೊತ್ತಾಯ್ತು ಬಿಡಿ, ನಿಮ್ಮ ಜನರಷ್ಟೇ ನಿಮ್ಮಲ್ಲಿ ಹುಟ್ಟೋ ವೈರಸ್‍ಗಳೂ ಶಿಸ್ತಿನ ಸಿಪಾಯಿಗಳೇ’ ಎನ್ನುತ್ತಾ ಬಾಂದಿನ ಕಲ್ಲುಗಳನ್ನು ನಮ್ಮವರು ಕೈಗೆತ್ತಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.