ADVERTISEMENT

ಚುರುಮುರಿ: ಆಗ ಪಾಸ್, ಈಗ...

ಮಲ್ಲಿಕಾರ್ಜುನ ಗುಮ್ಮಗೋಳ
Published 21 ಅಕ್ಟೋಬರ್ 2020, 18:01 IST
Last Updated 21 ಅಕ್ಟೋಬರ್ 2020, 18:01 IST
   

ಕೊರೊನಾ ಸೋಂಕು ಹರಡಬಾರದೆಂಬ ಕಾರಣದಿಂದ ಪರೀಕ್ಷೆ ಇಲ್ಲದೆ ಪದವಿ ವಿದ್ಯಾರ್ಥಿ ಗಳನ್ನು ತೇರ್ಗಡೆ ಮಾಡುವಂತೆ ಸೂಚಿಸಲು ಸರ್ಕಾರ ಚಿಂತನೆ ನಡೆಸಿತ್ತು. ಎಷ್ಟೋ ಚಾನ್ಸ್ ತೆಗೆದುಕೊಂಡರೂ ಪಾಸಾಗದ ಮಲ್ಲೇಶಿಗೆ ಸುದ್ದಿ ಹಂಡೆ ಹಾಲು ಕುಡಿದಷ್ಟು ಸಂತೋಷ ತಂದಿತ್ತು. ಇದೇ ಖುಷಿಯಲ್ಲಿ ‘ಅಮ್ಮಾ ನಾ ಪಾಸ್ ಆದೆ...’ ಎಂದು ಚಿಟ್ಟನೆ ಚೀರಿದ.

ಕರೆಂಟ್ ಗಿರೆಂಟ್ ಶಾಕ್ ಹೊಡಿತೋ ಏನೋ ಎಂದು ಗಾಬರಿಗೆ ಬಿದ್ದ ಮಲ್ಲೇಶಿಯ ತಾಯಿ, ಕೈಯಲ್ಲಿಯ ಮುಸುರೆ ಪಾತ್ರೆ ಹಿಡಿದುಕೊಂಡೇ ಓಡಿಬಂದಳು. ಮೂರು ವರ್ಷದ ಪದವಿಯನ್ನು ಆರು ವರ್ಷವಾದರೂ ಪಾಸ್ ಮಾಡದ ಮುಗ್ಗಲಗೇಡಿ ಮಲ್ಲೇಶಿ ದಿನ
ಪತ್ರಿಕೆಯನ್ನು ತೂರಾಡುತ್ತ ಕುಣಿಯುತ್ತಿದ್ದ.

‘ಯಾಕೋ ನನ್ನ ಕಂದಾ ಏನಾತೋ? ಕುಣಿಬ್ಯಾಡೋ ಯಪ್ಪಾ, ಜಾರಿಗೀರಿ ಬಿದ್ದಗಿದ್ದಿ’ ಎಂದು ಮಗನನ್ನು ತಬ್ಬಿಕೊಂಡು ತಲೆ ಸವರಿದಳು. ‘ದಡ್ಡನನ್ನ ಮಗನೇ ನೀ ಯಾವಾಗ ಪಾಸ್ ಆಗ್ಬೇಕಲೇ ಎಂದು ಅಪ್ಪ ಹಂಗ್ಸತಿದ್ದಾ. ಪೇಪರ್ ನೋಡಿಲ್ಲೆ, ನಾ ಪಾಸ್ ಆಗೇನಿ’ ಎಂದು ದಿನಪತ್ರಿಕೆ ಅವ್ವನ ಮುಂದೆ ಹಿಡಿದ.

ADVERTISEMENT

ಓದು ಬಾರದ ತಾಯಿ ‘ಐ ನನ್ನ ಸೆಡ್ಗರಾ, ಎಷ್ಟ ಸ್ಯಾಣ್ಯಾ ಅದಿಯೋ, ನಿನ್ನ ಬಾಯಾಗ್ ಪೇಢೆ ಹಾಕ್ಲಿ’ ಎಂದಳು. ಪೇಢೆ ಎನ್ನುತ್ತಿದ್ದಂತೆ ಮಲ್ಲೇಶಿ ‘ಯವ್ವಾ, ಒಂದ್ ಗಾಂಧಿ ನೋಟ್ ತಾ ಇಲ್ಯ’ ಎಂದು ಐನೂರು ರೂಪಾಯಿ ಇಸಿದುಕೊಂಡ. ‘ಕೊರೊನಾ ತಾಯೇ, ಬಾಳ್ ಜನರಿಗೆ ನೀ ಹೆಮ್ಮಾರಿ ಆಗಿರ್ಬೋದು. ಆದ್ರ ನನ್ಗ್ ನೀ ಭಾಗ್ಯದಾ ದೇವಿ. ನಿನ್ನ ಕೃಪೆಯಿಂದ ಪರೀಕ್ಷೆಗಳು ರದ್ದಾದ್ವು. ಪರೀಕ್ಷೆ ಬರಿಯದೇ ಇದ್ರೂ ಸರ್ಕಾರ ನನ್ನ ಪಾಸ್ ಮಾಡೇತಿ. ನಿನಗೆ ತುಪ್ಪದ ದೀಪಾ ಹಚ್ಚತೈನಿ’ ಎಂದು ಊರಿಗೆಲ್ಲ ಪೇಢೆ ಹಂಚಿ ಸಂಭ್ರಮಪಟ್ಟ.

ಸಂಭ್ರಮದ ತೇಲಾಟದಲ್ಲಿ ತಿಂಗಳು ಉರುಳಿತು. ಮಾರ್ಕ್ಸ್‌ ಕಾರ್ಡ್ ತರಲು ಕಾಲೇಜಿಗೆ ಹೋಗುತ್ತಾನೆ. ಪ್ರಿನ್ಸಿಪಾಲರು ಪರೀಕ್ಷೆಯ ಹಾಲ್ ಟಿಕೆಟ್ ಕೈಗೆ ಕೊಟ್ಟು, ‘ಪರೀಕ್ಷೆ ಇಲ್ಲದೆ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳನ್ನ ಪಾಸ್ ಮಾಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶವಾಗಿದೆ’ ಎಂದರು. ಮಲ್ಲೇಶಿಗೆ ನಿಜವಾಗಲೂ ಶಾಕ್ ಹೊಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.