ADVERTISEMENT

ಚುರುಮುರಿ: ಕ್ರೈಂ ಕಾಯಿಲೆ

ಮಣ್ಣೆ ರಾಜು
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
   

ಶಂಕ್ರಿ ಮನೆಯ ಟಿ.ವಿ. ಕೆಟ್ಟಿತ್ತು. ಮಳೆ, ಚಳಿಗೆ ಥಂಡಿಯಾಗಿ ನೆಗಡಿ, ಜ್ವರ ಬಂದಿರಬಹುದು ಎಂದು ಸುಮಿ ಟಿ.ವಿಗೆ ಬೆಚ್ಚಗೆ ಬಟ್ಟೆ ಹೊದಿಸಿ ಮನೆಮದ್ದು ಮಾಡಿದ್ದಳು. ಆದರೂ ಟಿ.ವಿ. ಕಾಯಿಲೆ ಗುಣವಾಗಲಿಲ್ಲ.

ಚಿಕಿತ್ಸೆಗೆಂದು ಡಾಕ್ಟರ್ ಬಳಿ ಟಿ.ವಿ. ತಂದರು. ಟಿ.ವಿ. ವಯಸ್ಸು ತಿಳಿದ ಡಾಕ್ಟರ್ ಅದರ ಆಯುಷ್ಯ ಅಂದಾಜು ಮಾಡಿದರು. ಟಿ.ವಿ. ಆನ್ ಮಾಡಿದರೆ ಕಾಮನಬಿಲ್ಲಿನಂತೆ ಬಣ್ಣಗಳ ಪಟ್ಟಿ ಪ್ರದರ್ಶಿಸಿತು.

ಟಿ.ವಿಯನ್ನು ಬಿಚ್ಚಿದಾಗ ಒಳಗಿನಿಂದ ಜಿರಳೆ, ಜೇಡ, ಹುಳುಹುಪ್ಪಟೆ ಹರಿದುಬಂದವು. ‘ಟಿ.ವಿಯಲ್ಲಿ ಕ್ರಿಮಿಕೀಟಗಳು ಮನೆ ಮಾಡಿಕೊಂಡಿವೆ’ ಅಂದ್ರು.

ADVERTISEMENT

‘ಟಿ.ವಿಗೆ ಕ್ರಿಮಿನಾಶಕ ಸಿಂಪಡಿಸಬೇಕಾಗಿತ್ತಾ ಡಾಕ್ಟ್ರೇ?’ ಎಂದು ಶಂಕ್ರಿ ಕೇಳಿದಾಗ ಡಾಕ್ಟರ್ ಗುರಾಯಿಸಿ ನೋಡಿದರು. ತೆಪ್ಪಗಾದ.

‘ನೀವು ಯಾವ ಚಾನೆಲ್ ನೋಡ್ತೀರಿ?’ ಡಾಕ್ಟರ್ ಕೇಳಿದರು.

‘ನಾನು ಧಾರಾವಾಹಿಗಳನ್ನು ನೋಡ್ತೀನಿ ಡಾಕ್ಟ್ರೇ, ಅತ್ತೆ-ಸೊಸೆ ಜಗಳ, ಅತ್ತಿಗೆ-ನಾದಿನಿ ರಗಳೆ, ಅವಳಿಗೆ ಇವಳು ವಿಷ ಹಾಕೋದು, ಅವಳು ಮನೆ ಬಿಟ್ಟು ಓಡಿ ಹೋಗೋದು, ಇವಳು ಒಡವೆ ಕದ್ದು ಅವಳ ಮೇಲೆ ಆರೋಪ ಹೊರಿಸೋದು ಇಂತಹ ರಸವತ್ತಾದ ಪ್ರಸಂಗಗಳು ಧಾರಾವಾಹಿಯಲ್ಲಿ ನಿತ್ಯ ಮೂಡಿಬರುತ್ತವೆ!’ ಆನಂದವಾಗಿ ಹೇಳಿದಳು ಸುಮಿ.

‘ಸಾರ್, ನಾನು ದೈನಂದಿನ ಕರಾಳ ಕ್ರೈಂ ಸುದ್ದಿಗಳ ನ್ಯೂಸ್ ಚಾನೆಲ್ ನೋಡ್ತೀನಿ. ಜನಾನುರಾಗಿಗಳ ಭ್ರಷ್ಟಾಚಾರ, ಜನಾನುರೋಗಿಗಳ ದುಷ್ಟಾಚಾರ, ಸಿನಿಮೀಯ ರೀತಿಯ ಕಿಡ್ನ್ಯಾಪ್, ಕೊಲೆ, ದರೋಡೆಯಂತಹ ರಣರೋಚಕ ನ್ಯೂಸ್ ನೋಡಿ ಖುಷಿಪಡ್ತೀನಿ’ ಎಂದ ಶಂಕ್ರಿ.

‘ನಿಮ್ಮ ಟಿ.ವಿ. ಕೆಟ್ಟಿಲ್ಲ... ಸಿಟ್ಟಾಗಿದೆ’ ಅಂದ್ರು ಡಾಕ್ಟರ್.

‘ಯಾಕಂತೆ ಸಾರ್?’

‘ಕ್ರೈಂ ಕಾರ್ಯಕ್ರಮ ಚಟದಿಂದ ನೀವು ನಿಮ್ಮ ಸಂಸಾರದ ನೆಮ್ಮದಿಯನ್ನೂ ಕೆಡಿಸಿಕೊಂಡು ಸಮಾಜದ ನೆಮ್ಮದಿಯನ್ನೂ ಕೆಡಿಸ್ತೀರಿ ಅಂತ ಟಿ.ವಿಗೆ ಆತಂಕವಾಗಿ ನಿಮ್ಮ ಮೇಲೆ ಸಿಟ್ಟು ಬಂದಿದೆ...’ ಎಂದು ಡಾಕ್ಟರೂ ಸಿಟ್ಟಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.