ADVERTISEMENT

ಚುರುಮುರಿ | ಕೈದಿ ದೇವೋಭವ!

ಚಂದ್ರಕಾಂತ ವಡ್ಡು
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
   

ಅಂದು ಪವಿತ್ರ ಶ್ರಾವಣ ಸೋಮವಾರ. ತಿಂಗಳೇಶನ ಗೃಹಲಕ್ಷ್ಮಿ ಶ್ರದ್ಧಾಭಕ್ತಿಯಿಂದ ಸುದ್ದಿವಾಹಿನಿಗಳನ್ನು ವೀಕ್ಷಿಸುತ್ತಿದ್ದಳು. ಜಿಲ್ಲಾ ವರದಿಗಾರರು ದೇವಸ್ಥಾನಗಳ ಬದಲು ಕರ್ನಾಟಕದ ವಿವಿಧ ಕಾರಾಗೃಹಗಳ ಪ್ರತ್ಯಕ್ಷ ದರ್ಶನ, ಸಿಬ್ಬಂದಿ ಸಂದರ್ಶನ ಮಾಡಿಸುತ್ತಿದ್ದರು.

‘ನೋಡಿ, ನಿಮ್ಮ ಕಾರಾಗೃಹಕ್ಕೆ ಬೆಂಗಳೂರಿನಿಂದ ವಿಶೇಷ ಅತಿಥಿಗಳು ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ನೀವು ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ?’

‘ನಮ್ಮದು ಸ್ವತಂತ್ರಪೂರ್ವ ಇತಿಹಾಸವುಳ್ಳ ಕಾರಾಗೃಹ. ಎಂಥೆಂಥ ಮಹಾನ್ ಅಪರಾಧಿಗಳನ್ನು ನೋಡಿಕೊಂಡ ಅನುಭವ, ಕೀರ್ತಿ ನಮಗಿದೆ. ನಮ್ಮ ಮೇಲಿನ ನಂಬಿಕೆಯಿಂದ ಈಗ ಕೆಲವು ಗಣ್ಯ ಕೈದಿಗಳನ್ನು ಇಲ್ಲಿಗೆ ಕಳಿಸುತ್ತಿದ್ದಾರೆ. ಇದು ನಮಗೆ ಹೆಮ್ಮೆಯ ವಿಷಯ’.

ADVERTISEMENT

‘ಬೆಂಗಳೂರಿನಲ್ಲಿ ಆರೋಪಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿತ್ತಂತೆ… ನಿಮ್ಮಲ್ಲಿಯ ಸೌಲಭ್ಯಗಳ ಬಗ್ಗೆ ಒಂದಿಷ್ಟು ಹೇಳಬಹುದೇ?’

‘ನಮ್ಮದು ಚಿಕ್ಕ ಜಿಲ್ಲಾ ಕೇಂದ್ರ. ಮಹಾನಗರದಂತೆ ಇಲ್ಲಿ ಕೇಳಿದ್ದೆಲ್ಲಾ ಒದಗಿಸಲು ಹೇಗೆ ಸಾಧ್ಯ? ಆದರೂ ನಾವು ಶಕ್ತಿಮೀರಿ ಶ್ರಮಿಸುತ್ತೇವೆ, ಅನುಮಾನ ಬೇಡ’.

‘ಕೈದಿಗಳ ಸಾಮೂಹಿಕ ವರ್ಗಾವಣೆ ಬಗ್ಗೆ ನಿಮ್ಮ ಅಭಿಪ್ರಾಯ?’

‘ಕೈದಿಗಳಿಗೆ ಆಗಲಿ, ನೌಕರರಿಗಾಗಲಿ ವರ್ಗಾವಣೆಯೇ ‘ಶಿಕ್ಷೆ’ ಆಗಬಾರದು. ಅವರಿಗೆ ಬೇರೆಬೇರೆ ವ್ಯವಸ್ಥೆಗಳ ಸ್ವಾನುಭವ ದಕ್ಕುವಂತಾಗಬೇಕು. ಇದೊಂಥರ ವಿಕೇಂದ್ರೀಕರಣ. ನಮ್ಮ ಜೈಲಿನ ಬಗ್ಗೆ ಈವರೆಗೆ ಯಾವೊಬ್ಬ ಕೈದಿಯೂ ದೂರಿಲ್ಲ’.

‘ಹಾಗಾದರೆ ಬೆಂಗಳೂರಿನಂತೆ ನಿಮ್ಮ ಜೈಲು ಕೂಡ ‘ಕೈದಿಸ್ನೇಹಿ’ ಎನ್ನಿ…’

‘ಹೌದು, ಇಲ್ಲಿಗೆ ಬರುವವರು ಯಾರೇ ಇರಲಿ, ಎಷ್ಟೇ ಕೊಲೆ-ದರೋಡೆ ಮಾಡಿರಲಿ, ನಮಗೆ ಮಾತ್ರ ಅತಿಥಿಗಳೇ. ಅತಿಥಿ ಸತ್ಕಾರ ನಮ್ಮ ಜೈಲುಸಂಸ್ಕೃತಿ’.

‘ಸೆರೆಮನೆಗಳ ಸುಧಾರಣೆ ಬಗ್ಗೆ ನಿಮ್ಮ ಸಲಹೆಗಳು…’

‘ಕೈದಿಗಳಿಗೆ ಈಗ ದೊರೆಯುತ್ತಿರುವ ರಹಸ್ಯ ಸೌಲಭ್ಯಗಳು ಕಾನೂನುಬದ್ಧವಾಗಿ ದೊರೆಯುವಂತಾಗಬೇಕು. ಸೆರೆವಾಸ ಇನ್ನಷ್ಟು ಆಕರ್ಷಕವೂ ಜನಪ್ರಿಯವೂ ಆಗಲು ಈ ನಿಟ್ಟಿನ ಕ್ರಮ ಅತ್ಯಗತ್ಯ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.