‘ಈ ಬಸ್‌ಗಳಲ್ಲಿ ಈಗೀಗ ಬರೋಕೇ ಆಗಲ್ಲ ರೀ, ಬರೀ ಜಗಳ’ ವಟಗುಡುತ್ತಾ ಒಳಗೆ ಬಂದಳು ಹೆಂಡತಿ.
‘ಏನು ಗಲಾಟೆ, ಯಾರ ನಡುವೆ ಜಗಳ’ ಕೇಳಿದೆ ಶಾಂತವಾಗಿ.
ಸೀಟಿಗಾಗಿ ಯಾರೋ ಇಬ್ಬರು ಜಗಳ ಮಾಡ್ತಿದ್ರು, ಆಗ ಒಬ್ಬ ಇದ್ದಕ್ಕಿದ್ದಂತೆ ಎದ್ದು, ಓಯ್, ಯಾರೂ ಮಾತಾಡೋ ಹಾಗಿಲ್ಲ, ಇದು ನಮ್ಮಪ್ಪನ ಬಸ್ ಅನ್ನೋದಾ?’
‘ಸರ್ಕಾರಿ ಬಸ್‌ನಲ್ಲೂ ಹಾಗಂದ್ರಾ?’
‘ಹ್ಞೂಂ ರೀ, ಅವನು ಆ ಬಸ್ ಡ್ರೈವರ್ ಮಗನಂತೆ’.
‘ಬಸ್‌ನಲ್ಲಿ ಪ್ರಯಾಣಿಕರು ಏನೂ ಹೇಳಲಿಲ್ವ?’
‘ಕ್ವಶ್ಚನ್ ಮಾಡಿದ್ರು, ರಾಜಕಾರಣಿಗಳ ಮಕ್ಕಳು ಇದು ನಮ್ಮಪ್ಪ ಮಾಡಿದ ರಸ್ತೆ ಅಂತೆಲ್ಲ ಹೇಳಿದ್ರೆ ಸುಮ್ನಿರ್ತೀರಿ, ಈ ಬಸ್ ನಮ್ಮಪ್ಪಂದು ಅಂದ್ರೆ ಸಿಟ್ಟು ಬರುತ್ತಾ ಅಂತ ಕೇಳಿದ, ಆಗ ಎಲ್ಲರೂ ಗಪ್‌ಚುಪ್’.
‘ಇದೊಳ್ಳೆ ಆಯ್ತಲ್ಲ, ನಾಳೆ ಸಿಎಂ, ಮಾಜಿ ಸಿಎಂ, ಮಿನಿಸ್ಟರ್ ಮಕ್ಕಳೆಲ್ಲ ವಿಧಾನಸೌಧ ನಮ್ಮಪ್ಪಂದು, ಯಾರೂ ಬರೋ ಹಾಗಿಲ್ಲ ಅಂದ್ರೆ ಏನ್ ಮಾಡೋದು’ ಎನ್ನುತ್ತಾ ನಕ್ಕೆ.
‘ತಲೆ ಕೆಟ್ಟುಹೋಗಿದೆ ರೀ, ಸಾಹಿತ್ಯ ಸಮ್ಮೇಳನ ನಡೆಯಲಿರೋ ಮಂಡ್ಯಕ್ಕಾದರೂ ಸುಮ್ಮನೆ ಹೋಗಿ, ಸಿದ್ಧತೆ ಹೇಗಿದೆ ನೋಡ್ಕೊಂಡ್ ಬರ್ತೀನಿ’ ಎಂದಳು ಹೆಂಡತಿ.
‘ಹುಷಾರು, ನೀನು ಮಧ್ಯೆ ಚನ್ನಪಟ್ಟಣದಲ್ಲಿ ಇಳಿದುಬಿಟ್ಟರೆ, ನಮ್ಮಪ್ಪ–ನಮ್ಮ ಅಜ್ಜನ ಹೆಸರೇ ನನಗೆ ಮುಳುವಾಯಿತು ಅಂತ ಒಬ್ಬರು ಅಳ್ತಿರ್ತಾರೆ, ಮತ್ತೆ ನಿನ್ ಮೂಡ್ ಹಾಳಾಗುತ್ತೆ’ ಎಂದೆ.
‘ಕಣ್ಣೀರ ಕಥೆ ಕೇಳೋಕೆ ನನಗಿಷ್ಟ ಇಲ್ಲ ರೀ... ಅಲ್ಲೆಲ್ಲೂ ನಾನು ಇಳಿಯೋದಿಲ್ಲ. ನೇರವಾಗಿ ಮಂಡ್ಯದಲ್ಲಿಯೇ ಇಳಿತೀನಿ’.
‘ಅಲ್ಲಿಯೂ ಕರುಳ ಸಂಬಂಧ ಸಾಹಿತ್ಯದ ಬಗ್ಗೆ ಹೇಳೋರಿದಾರೆ’.
‘ಹೌದಾ, ಅಂಥವರು ಯಾರಿದ್ದಾರೆ, ಏನಂತಾರೆ?’
‘ಅವರು ಮಾತು ಶುರು ಮಾಡೋದೇ ನಾನು ಇಂಥವರ ಮರಿ ಮೊಮ್ಮಗ ಅಂತ’ ಎಂದೆ. ಹೆಂಡತಿಗೆ ನಗು ತಡೆಯಲಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.