ADVERTISEMENT

ಚುರುಮುರಿ: ದೀಪಾವಳಿ ಕವನ

ಬಿ.ಎನ್.ಮಲ್ಲೇಶ್
Published 1 ನವೆಂಬರ್ 2024, 1:46 IST
Last Updated 1 ನವೆಂಬರ್ 2024, 1:46 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಯಾಕೋ ತೆಪರಾ ಸಪ್ಪಗೆ ಕೂತಿದೀಯ? ರಾಜ್ಯೋತ್ಸವ ಪ್ರಶಸ್ತಿ ಸಿಗ್ಲಿಲ್ಲ ಅಂತಾನಾ? ಬೇಜಾರ್ ಮಾಡ್ಕಾಬೇಡ, ಮುಂದಿನ ಸಲ ಸಿಗುತ್ತೆ ಬಿಡು’ ಹರಟೆಕಟ್ಟೆಯಲ್ಲಿ ಮಂಜಮ್ಮ ತೆಪರೇಸಿಯನ್ನು ಸಮಾಧಾನಿಸಿದಳು.

‘ಈ ತೆಪರ ಅರ್ಜಿ ಜತಿ ರಾಜ್ಯಪಾಲರ ಫೋಟೊ ಕಳಿಸೋ ಬದ್ಲು ಇ.ಡಿ. ಅವರಿಂದ ಒಂದು ರೆಕ್ಮಂಡೇಶನ್ ಮಾಡಿಸಿದ್ದಿದ್ರೆ ಗ್ಯಾರಂಟಿ ಪ್ರಶಸ್ತಿ ಸಿಕ್ಕಿರೋದು. ಮುಂದಿನ ಸಲ ಈ ಐಡಿಯಾ ಮಾಡೋ ತೆಪರ’ ಗುಡ್ಡೆ ನಕ್ಕ.

ADVERTISEMENT

‘ಪುನರಪಿ ಪ್ರಯತ್ನಂ, ಪುನರಪಿ ನಿರಾಕರಣಂ’ ದುಬ್ಬೀರ ಹೊಸ ಶ್ಲೋಕ ಹೊಸೆದ.

‘ಪ್ರಶಸ್ತಿ ಮನೆ ಹಾಳಾಗ್ಲಿ, ದೀಪಾವಳಿ ಹೆಂಗೆ ನಡೆದೈತಿ ಹೇಳ್ರಪ’ ಮಂಜಮ್ಮ ಮಾತು ಬದಲಿಸಿದಳು.

‘ಮಕ್ಕಳಿಗೆ ಪಟಾಕಿ, ತನಗೆ ರೇಷ್ಮೆ ಸೀರೆ ಕೊಡ್ಸಬೇಕು ಅಂತ ನನ್ ಹೆಂಡ್ತಿ ಗಂಟು ಬಿದ್ದಿದ್ಲು, ಒಂದೆರಡು ಕವನ ಹೇಳಿ ಮೆಲ್ಲಕೆ ಬಚಾವಾದೆ’ ಎಂದ ಪರ್ಮೇಶಿ.

‘ಹೌದಾ? ಏನಪ ಅವು ಕವನ?’

‘ಪ್ರಿಯೆ, ಈ ದೀಪಾವಳಿಗೆ ಪಟಾಕಿಗಳೇಕೆ ಬೇಕು, ನಿನ್ನ ಮಾತುಗಳೇ ಸಾಕು ಅಂದೆ. ಜೋರು ಜಗಳಕ್ಕೇ ಬಿದ್ಲು’.

‘ಮತ್ತೆ ಬಿಡ್ತಾಳಾ? ಆಮೇಲೆ?’

‘ಸೀರೆಗಾಗಿ ನಿನ್ನ ಸೊರಸೊರ ಅಳು... ಅದೇ ಸುರುಸುರು ಬತ್ತಿ... ನಿನ್ನ ಸಿಟ್ಟು, ಸೆಡವು, ದುಃಖ ದುಮ್ಮಾನ, ಆಟಂಬಾಂಬಿಗೆ ಸಮಾನ’ ಅಂದೆ. ಅಡುಗೆ ಮನೇಲಿ ಪಾತ್ರೆ ಪಡಗ ಸೌಂಡ್ ಜೋರಾದ್ವು’.

‘ನಿನ್ ಮೇಲೆ ಬಾಣ ಬಿರುಸು ಬಿಡ್ಲಿಲ್ವಾ?’

‘ಇಲ್ಲ, ‘ನೀನೊಮ್ಮೆ ಕಿರು ನಕ್ಕರೂ ಸಾಕು ಅರಳುತ್ತವೆ ಅಲ್ಲಲ್ಲಿ ಹೂ ಮತಾಪು’ ಅಂದೆ. ಸ್ವಲ್ಪ ಮೆತ್ತಗಾದ್ಲು’.

‘ಪಾಕಡ ನೀನು, ಮುಂದೆ?’

‘ಪ್ರಿಯೆ, ಈ ದೀಪಾವಳಿಗೆ ದೀಪಗಳೇಕೆ ಬೇಕು? ನಿನ್ನ ಕಣ್ಣ ಬೆಳಕೇ ಸಾಕು’ ಅಂದೆ ನೋಡು, ಫುಲ್ ಬಿದ್ದೋದ್ಲು... ಸೀರೆನೂ ಇಲ್ಲ, ಪಟಾಕಿನೂ ಇಲ್ಲ!’

‘ಎಲಾ ಮಳ್ಳ, ಬೆಣ್ಣೆ ಚೆನ್ನಾಗಿ ಹಚ್ತೀಯ’ ಎಂದಳು ಮಂಜಮ್ಮ.

ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.