ADVERTISEMENT

ಚುರುಮುರಿ: ಪಂಚೆ ಕಲ್ಚರ್

ಮಣ್ಣೆ ರಾಜು
Published 23 ಜುಲೈ 2024, 23:52 IST
Last Updated 23 ಜುಲೈ 2024, 23:52 IST
...
...   

ಪಂಚೆ ಉಟ್ಟು ಮಾಲ್‍ಗೆ ಬಂದ ಶಂಕ್ರಿಗೆ ಸೆಲ್ಯೂಟ್ ಹೊಡೆದ ಸೆಕ್ಯೂರಿಟಿ, ‘ಪಂಚೆಯಲ್ಲಿ ತುಂಬಾ ಚೆನ್ನಾಗಿ ಕಾಣಿಸ್ತೀರಿ ಸಾರ್...’ ಎಂದು ಹೇಳಿ ಸ್ವಾಗತಿಸಿದ. ಸುಮಿಗೂ ಖುಷಿಯಾಯಿತು.

‘ಸಾರ್, ನಮ್ಮ ಪಂಚೆ ಮಳಿಗೆಯಲ್ಲಿ ಡಿಸ್ಕೌಂಟ್ ಆಫರ್ ಇದೆ’ ಎಂದ ಮಾಲ್ ಸಿಬ್ಬಂದಿ.

ಪಂಚೆ ಮಳಿಗೆಯಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿದ್ದರು. ಗಂಡ, ಮಕ್ಕಳಿಗೆಂದು ಉತ್ಸಾಹದಿಂದ ಪಂಚೆ ಖರೀದಿಸುತ್ತಿದ್ದರು. ಟ್ರಯಲ್ ರೂಮ್‌ನಲ್ಲಿ ಮಾಲ್ ಸಿಬ್ಬಂದಿ ಗಂಡಸರು, ಮಕ್ಕಳಿಗೆ ಪಂಚೆ ಉಡಿಸುತ್ತಿದ್ದರು. ಸೊಂಟದಿಂದ ಜಾರದಂತೆ, ಕಾಲು ತೊಡರದಂತೆ ಪಂಚೆ ಉಡುವುದನ್ನು ಕಲಿಸಿಕೊಡುತ್ತಿದ್ದರು.

ADVERTISEMENT

ಪಕ್ಕದ ಮಳಿಗೆಯಲ್ಲಿ ಚೀರಾಟ ಕೇಳಿ ಶಂಕ್ರಿ, ಸುಮಿ ಆತಂಕದಿಂದ ಅಲ್ಲಿಗೆ ಓಡಿಬಂದರು. ‘ಮೇಡಂ, ಇದು ಪಂಚೆ ಉಟ್ಟವರ ಚಿಕಿತ್ಸಾ ಕೇಂದ್ರ. ಎಸ್ಕಲೇಟರ್‌ನಲ್ಲಿ ಜಾರಿದವರು, ಪಂಚೆ ತೊಡರಿ ಬಿದ್ದು ಗಾಯಗೊಂಡವರಿಗೆ ಇಲ್ಲಿ ಉಚಿತವಾಗಿ ಪ್ರಥಮ ಚಿಕಿತ್ಸೆ ನೀಡುತ್ತೇವೆ’ ಮಾಲ್ ಮ್ಯಾನೇಜರ್ ಹೇಳಿದರು.

‘ಪಂಚೆ ಪ್ರೇಮ ಇಷ್ಟವಾಯ್ತು’ ಸುಮಿ ಮೆಚ್ಚಿದಳು.

‘ಹೌದು ಮೇಡಂ, ಸಿದ್ದರಾಮಯ್ಯ ಪಂಚೆ ಉಟ್ಟು ರಾಜ್ಯಭಾರ ಮಾಡ್ತಿದ್ದಾರೆ. ದೇವೇಗೌಡರು ಪಂಚೆಯಲ್ಲೇ ದೇಶ ಆಳಿದರು. ಕುಮಾರಸ್ವಾಮಿ ಪಂಚೆ ಉಟ್ಟು ದೇಶದ ಮಂತ್ರಿಯಾಗಿದ್ದಾರೆ. ಪಂಚೆ ಬರೀ ರೈತರು ಉಡುವ ‘ಅಗ್ರಿ’ಕಲ್ಚರ್ ಅಲ್ಲ, ನಮ್ಮ ಶ್ರೀಮಂತ ಸಂಸ್ಕೃತಿ ಸಾರುವ ‘ಸಿರಿ’ಕಲ್ಚರ್. ವರ್ಷಕ್ಕೊಮ್ಮೆ ಮಾಲ್‍ನಲ್ಲಿ ಪಂಚೆ ಫೆಸ್ಟ್ ಆಚರಿಸಲು ತೀರ್ಮಾನಿಸಿದ್ದೇವೆ’ ಅಂದರು ಮ್ಯಾನೇಜರ್.

‘ಪಂಚೆ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪಟಾಪಟಿ ಚಡ್ಡಿಯಲ್ಲಿ ಬರುವವರಿಗೂ ಮಾಲ್‍ಗೆ ಪ್ರವೇಶ ನೀಡುತ್ತೀರಾ?’ ಶಂಕ್ರಿ ಕೇಳಿದ.

‘ಮಾಲ್ ಪ್ರವೇಶದ ಬಗ್ಗೆ ಸರ್ಕಾರದ ಮಾರ್ಗ ಸೂಚಿಯಲ್ಲಿ ಇದೂ ಸೇರಿದ್ದರೆ ಅನುಸರಿಸ್ತೀವಿ. ಪಂಚೆ ಬದಲು ಟವೆಲ್ ಸುತ್ತಿಕೊಂಡು ಬರುವವರಿಗೂ ಪ್ರವೇಶ ಕೊಡಬೇಕು ಎಂದು ಸರ್ಕಾರ ಹೇಳಿದರೆ, ಅದನ್ನೂ ಪಾಲನೆ ಮಾಡ್ತೀವಿ...’ ಎಂದರು ಮ್ಯಾನೇಜರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.