ಪಟಾಕಿ ಖರೀದಿಗೆ ಬಂದಿದ್ದ ಶಂಕ್ರಿ, ‘ಶಬ್ದಮಾಲಿನ್ಯ, ವಾಯುಮಾಲಿನ್ಯ ಉಂಟು ಮಾಡದ ಪರಿಸರಸ್ನೇಹಿ ಹಸಿರು ಪಟಾಕಿ ಕೊಡಿ’ ಅಂದ.
‘ಯಾವ ಹಸಿರಿನ ಕಲರ್ ಬೇಕು ಸಾರ್? ಪ್ಯಾರೆಟ್ ಗ್ರೀನ್, ಡಾರ್ಕ್ ಗ್ರೀನ್, ಲೈಟ್ ಗ್ರೀನ್?’ ಅಂಗಡಿಯವ ಕೇಳಿದ.
‘ಕಲರ್‌ಫುಲ್ ಪಟಾಕಿಗಿಂತ ಕೈ, ಜೇಬು ಸುಡದ ಪಟಾಕಿ ಬೇಕು’ ಅಂದಳು ಸುಮಿ.
‘ನಮ್ಮಲ್ಲಿ ಇರುವುದೆಲ್ಲಾ ಆರೋಗ್ಯಕರ ಪಟಾಕಿ, ‘ಢಂ’ ಅನ್ನಲ್ಲ, ‘ಘಂ’ ಅನ್ನುತ್ತವೆ’.
‘ನಿಮ್ಮ ಪಟಾಕಿಗಳನ್ನು ಸುಟ್ಟರೆ ಕೆಟ್ಟ ಹೊಗೆ ಬರಬಾರದು’.
‘ನಮ್ಮ ಪಟಾಕಿಗಳು ಆಹ್ಲಾದಕರ ಸುವಾಸನೆ ಬೀರುತ್ತವೆ. ಗುಲಾಬಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ ಫ್ಲವರ್‌ಪಾಟ್ ಕೊಂಡುಕೊಳ್ಳಿ, ಹಚ್ಚಿ ದರೆ ಆಯಾ ಹೂವಿನ ಪರಿಮಳ ಹರಡುತ್ತವೆ’.
‘ಮಕ್ಕಳಿಗೆ ನಿರುಪದ್ರವಿ ಚಿನಕುರುಳಿ ಪಟಾಕಿ ಕೊಡಿ’ ಶಂಕ್ರಿ ಕೇಳಿದ.
‘ಕೊಡ್ತೀನಿ, ಚಿನಕುರುಳಿ, ಈರುಳ್ಳಿ, ಬೆಳ್ಳುಳ್ಳಿ ಪಟಾಕಿಗಳೂ ನಮ್ಮಲ್ಲಿವೆ’.
‘ಈರುಳ್ಳಿ, ಬೆಳ್ಳುಳ್ಳಿ ಪಟಾಕಿ ದುಬಾರಿ, ಅವುಗಳ ಬೆಲೆ ಕೇಳಿದರೆ ನನ್ನ ತಲೆ ಸಿಡಿಯುತ್ತದೆ’ ಅಂದಳು ಸುಮಿ.
‘ಹಾಗೇನಿಲ್ಲ ಮೇಡಂ, ಒಗ್ಗರಣೆ ಸಾಸಿವೆಯಷ್ಟೇ ಸಿಡಿಯುತ್ತವೆ, ಇದರ ಜೊತೆಗೆ ಮೆಣಸಿನಕಾಯಿ, ನಿಂಬೆಹಣ್ಣಿನ ಪಟಾಕಿ ಸೇರಿಸಿ ಹಚ್ಚಿದರೆ ಹಿತಕರವಾದ ಸೌಂಡ್ ಬರುತ್ತೆ’.
‘ಬದನೆಕಾಯಿ, ಬೆಂಡೆಕಾಯಿ, ಮೂಲಂಗಿ, ಟೊಮೆಟೊ ಪಟಾಕಿಗಳೂ ಇವೆಯೆ?’ ಸುಮಿ ಕೇಳಿದಳು.
‘ದೀಪಾವಳಿ ಹಬ್ಬಕ್ಕೆ ಪಟಾಕಿ ಸಾಂಬಾರ್ ಮಾಡ್ತೀರಾ ಮೇಡಂ?!’ ಅಂಗಡಿಯವ ನಕ್ಕ.
‘ನೀವು ಊಟಕ್ಕೆ ಬರುವುದಾದರೆ ಮಾಡ್ತೀನಿ! ನಮಗೆ ಸೌಂಡು, ಹೊಗೆ ಬಾರದ ಪಟಾಕಿ ಕೊಡಿ’.
‘ನಿಮ್ಮ ಪಟಾಕಿ ಸಾಮರ್ಥ್ಯ ಅರ್ಥವಾಯ್ತು. ಹಾರ್ಮ್‌ಲೆಸ್ ಕುಂಬಳಕಾಯಿ ಪಟಾಕಿ ಕೊಂಡು ಕೊಳ್ಳಿ. ಸೌಂಡ್‍ಲೆಸ್, ಸ್ಮೋಕ್‍ಲೆಸ್, ಹಚ್ಚಿದರೆ ಇಡೀ ರಾತ್ರಿ ದೀಪದಂತೆ ಉರಿದು ಮನೆ ಬೆಳಗು ತ್ತದೆ’ ಅಂಗಡಿಯವ ಪಟಾಕಿ ಪ್ಯಾಕ್ ಮಾಡಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.