ADVERTISEMENT

ಚುರುಮುರಿ | ಅಸೆಂಬ್ಲಿ ಆಟ

ಮಣ್ಣೆ ರಾಜು
Published 24 ಫೆಬ್ರುವರಿ 2023, 22:00 IST
Last Updated 24 ಫೆಬ್ರುವರಿ 2023, 22:00 IST
   

‘ಐದು ವರ್ಷದ ಅಸೆಂಬ್ಲಿ ಆಟ ಐದು ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಂತೆ ಇಷ್ಟು ಬೇಗ ಮುಗಿದು ಹೋಗ್ತಾ ಇದೆಯಲ್ರೀ...’ ಶಂಕ್ರಿಗೂ ಬೇಸರ.

‘ಅಸೆಂಬ್ಲಿ ಆಟಗಾರರಿಗೂ ಹೀಗೇ ಅನಿಸಿರಬಹುದು. ಕೆಲವರಿಗೆ ಇದು ಕಡೇ ಆಟ. ಮರು ಆಯ್ಕೆ ಬಗ್ಗೆ ಅನುಮಾನ ಇರುವವರಿಗೆ ಇದು ಬೀಳ್ಕೊಡುಗೆ ಪಂದ್ಯವಾಗಬಹುದು’ ಅಂದಳು ಸುಮಿ.

‘ಸ್ಟಾರ್ ಪ್ಲೇಯರ್ ಯಡಿಯೂರಪ್ಪನವರು ಇನ್ನುಮುಂದೆ ಅಸೆಂಬ್ಲಿ ಆಟ ಆಡುವುದಿಲ್ಲವಂತೆ. ಜೊತೆಗೆ, ಎಲ್ಲಾ ರೂಪದ ಟಿಕೆಟ್ ಟೂರ್ನಿಗಳಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ’.

ADVERTISEMENT

‘ತಾವು ಆಟ ನಿಲ್ಲಿಸಿದರೂ ಎದುರಾಳಿಗಳನ್ನು ಆಟ ಆಡಿಸದೇ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಮುಂದೆ ಕಮಲ ಪಡೆಯ ಕೋಚ್ ಆಗಿ ಸಮರ್ಥ ತಂಡ ಕಟ್ಟಿ ಮುಂದಿನ ಪಂದ್ಯ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ’.

‘ಸುದೀರ್ಘ ಕಾಲ ಅಸೆಂಬ್ಲಿ ಆಟವಾಡಿದ ಯಡಿಯೂರಪ್ಪನವರು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿ ಅಂಗಳದಲ್ಲಿ ಆರ್ಭಟಿಸಿದ್ದರು. ಕಮಲ ಪಡೆಯ ನಾಯಕತ್ವ ವಹಿಸಿಕೊಂಡು ತಮ್ಮ ತಂಡವನ್ನು ಮುನ್ನಡೆಸಿ ಹಲವು ಗೆಲುವಿಗೆ
ಕಾರಣರಾಗಿದ್ದರು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲ ವಿಭಾಗಗಳಲ್ಲೂ ಸಮರ್ಥವಾಗಿ ಆಲ್‌ರೌಂಡ್ ಆಟವಾಡಿ ಉತ್ತಮ ಪ್ರದರ್ಶನ ನೀಡಿ ಎದುರಾಳಿ ಆಟಗಾರರನ್ನು ಬೆಚ್ಚಿಬೀಳಿಸಿದ್ದರು. ಬೆಂಬಲಿಗರನ್ನು ಮೆಚ್ಚಿಸಿ ಬೆರಗಾಗಿಸಿದ್ದರು’.

‘ತಾವು ಮತ್ತೊಮ್ಮೆ ಆಯ್ಕೆಯಾಗಿ ಅಸೆಂಬ್ಲಿ ಅಂಗಳಕ್ಕೆ ವಾಪಸ್ ಬರ್ತೀವೋ ಇಲ್ವೋ ಎಂಬ ಆತಂಕದಲ್ಲಿ ಕೆಲವು ಆಟಗಾರರು ಭಯಭೀತ
ರಾಗಿದ್ದಾರೆ. ಅಂತಹವರು ಅವರವರ ಕ್ಷೇತ್ರ ಕಣದಲ್ಲಿ ನೆಟ್‍ಪ್ರಾಕ್ಟೀಸ್ ಮಾಡಿ ಶಕ್ತಿ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ತಂಡದ ಹೈಕಮಾಂಡ್ ಅವಕಾಶ ನೀಡಬೇಕು’.

‘ಕಣ ಕ್ಷೇತ್ರದಲ್ಲಿ ಆಟಗಾರರು ತೋರುವ ಪ್ರದರ್ಶನದ ಆಧಾರದ ಮೇಲೆ ಅವರನ್ನು ಔಟ್ ಮಾಡಬೇಕೋ ಇನ್ ಮಾಡಬೇಕೋ ಅನ್ನೋದ್ರ ಬಗ್ಗೆ ಥರ್ಡ್ ಅಂಪೈರ್ ‘ಮತದಾರ ಪ್ರಭು’ ತೀರ್ಪು ನೀಡುತ್ತಾನೆ...’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.