ADVERTISEMENT

ಚುರುಮುರಿ: ಹಬ್ಬದ ಸಂಭ್ರಮ

ಗುರು ಪಿ.ಎಸ್‌
Published 30 ಅಕ್ಟೋಬರ್ 2024, 23:44 IST
Last Updated 30 ಅಕ್ಟೋಬರ್ 2024, 23:44 IST
ಚುರುಮುರಿ
ಚುರುಮುರಿ   

‘ದೀಪಾವಳಿ ಬಂದೇ ಬಿಡ್ತು, ಹೊಸ ಬಟ್ಟೆ ಇಲ್ಲ, ಬಂಗಾರ ಇಲ್ಲ. ಈ ಸಲ ಹಬ್ಬಕ್ಕೇನೂ ಕೊಡಿಸೋದಿಲ್ವ...’ ಅಡುಗೆ ಮನೆಯಿಂದಲೇ ಸುಪ್ರಭಾತ ಪ್ರಾರಂಭಿಸಿದಳು ಹೆಂಡತಿ. 

‘ನೀನೇ ಬಂಗಾರ, ಮತ್ತೇಕೆ ಬೇಕು ನಿನಗೆ ಚಿನ್ನ’ ಎಂದೆ ಪ್ರೀತಿಯಿಂದ. 

‘ಈ ಸಿನಿಮಾ–ನಾಟಕದ ಡೈಲಾಗ್‌ ಎಲ್ಲ ನನ್ನ ಮುಂದೆ ಹೇಳಬೇಡಿ. ಚಿನ್ನ ಕೊಡಿಸೋ ಕ್ಕಾಗದಿದ್ದರೂ ಹೊಸ ಸೀರೆಯನ್ನಾದರೂ ಕೊಡಿಸಿ’ ಸಿಟ್ಟಿನಲ್ಲಿಯೇ ಹೇಳಿದಳು ಪತ್ನಿ. 

ADVERTISEMENT

‘ಬಟ್ಟೆ–ಬಂಗಾರವೇ ಹಬ್ಬ ಅಲ್ಲ’ ನನಗೂ ಸಿಟ್ಟು ಬಂತು. 

‘ಹೋಗಲಿ ಮಕ್ಕಳಿಗೆ ಪಟಾಕಿಯಾದರೂ ತಗೊಂಡು ಬನ್ನಿ’ ಹೆಂಡತಿಯ ಧ್ವನಿ ಸ್ವಲ್ಪ ತಗ್ಗಿತು. 

‘ಪಟಾಕಿ ಹೊಡೆದರೆ ಮಾತ್ರ ದೀಪಾವಳಿನಾ? ನಾವು ಸಂತೋಷವಾಗಿರೋದೇ ಹಬ್ಬ’ ಎಂದೆ ವೇದಾಂತಿಯಂತೆ. 

‘ಇದೆಲ್ಲ ಕೇಳೋಕ್ಕಷ್ಟೇ ಸರಿ. ಹಬ್ಬ ಮಾಡಿಲ್ಲ ಅಂದ್ರೆ ಅಕ್ಕ–ಪಕ್ಕದವರು ಏನೆಂದುಕೊಳ್ತಾರೆ?’

‘ಅವರಿವರು ಏನಂದುಕೊಳ್ತಾರೋ ಅಂತ ಅವರಿಷ್ಟದಂತೆ ಜೀವನ ಮಾಡೋಕಾಗು
ತ್ತೇನಮ್ಮ, ನಮ್ಮಿಷ್ಟದಂತೆ ಬದುಕಬೇಕು’. 

‘ಅಂದರೆ ನಿಮ್ಮ ಪ್ರಕಾರ ಹಬ್ಬ ಅಂದರೇನು?’ 

‘ಬಯಸಿದ ಕ್ಷೇತ್ರದಲ್ಲಿ ಬಯಸಿದ ಪಕ್ಷದಿಂದ ಎಲೆಕ್ಷನ್‌ ಟಿಕೆಟ್ ಸಿಕ್ಕರೆ ಯುವ ರಾಜಕಾರಣಿಗಳಿಗೆ ಅದೇ ಹಬ್ಬ’. 

‘ಸೀನಿಯರ್ ರಾಜಕಾರಣಿಗಳಿಗೆ?’

‘ಬಯಸಿದ ಭೂಮಿ ಡಿನೋಟಿಫೈ ಆಗಿ ಕೈ ಸೇರಿದರೆ ರಾಜಕಾರಣಿಗಳಿಗೆ ಅದೇ ದೀಪಾವಳಿ’. 

‘ಮತ್ತೆ?’

‘ಜೈಲಿನಲ್ಲಿರೋರಿಗೆ ಬೇಲ್‌ ಸಿಕ್ಕರೆ ಹಬ್ಬ, ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಗೆ ಅವರ ಲೇಔಟ್‌ ಸೇಲ್ ಆದರೆ ಹಬ್ಬ’. 

‘ಮುಂದೆ?’ 

‘ಅಭಿನಯಿಸಿದ ಸಿನಿಮಾಗಳೆಲ್ಲ ಸೆಂಚುರಿ ಬಾರಿಸಿದರೆ ಸಿನಿಮಾ ನಟ–ನಟಿಯರಿಗೆ, ಆಡಿದ ಪಂದ್ಯಗಳಲ್ಲೆಲ್ಲ ಶತಕ ಹೊಡೆದರೆ ಕ್ರಿಕೆಟರ್‌ಗಳಿಗೆ ಹಬ್ಬ’ ಉದಾಹರಣೆ ಕೊಡುತ್ತಾ ಸಾಗಿದೆ. 

‘ನಿಮಗೆ ಯಾವಾಗ ನಿಜವಾದ ಹಬ್ಬ?’

‘ನೀನು ತವರು ಮನೆಗೆ ಹೋದಾಗ...’

ಅಡುಗೆ ಕೋಣೆಯಿಂದ ಸೌಟು ತೂರಿಬಂತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.