ADVERTISEMENT

ಚುರುಮುರಿ: ಕಾಯಿಲೆ ಲೀಲೆ

ಮಣ್ಣೆ ರಾಜು
Published 9 ಜುಲೈ 2024, 22:39 IST
Last Updated 9 ಜುಲೈ 2024, 22:39 IST
   

ಆಸ್ಪತ್ರೆಯ ಡೆಂಗಿ ವಾರ್ಡಿನಲ್ಲಿ ಹಾಸಿಗೆ ಹಿಡಿದಿದ್ದ ಮಗಳಿಗೆ ಸುಮಿ ಗಂಜಿ ಕುಡಿಸಿ ಆರೈಕೆ ಮಾಡುತ್ತಿದ್ದಳು. ಪಕ್ಕದ ಬೆಡ್ ರೋಗಿ ಕಡೆಯ ಹೆಂಗಸು ಬಂದು, ‘ನಿಮ್ಮ ಮಗಳೇನ್ರೀ?’ ಎಂದು ಮಾತಿಗಿಳಿದಳು.

‘ಹೌದೂರೀ, ಬಾಯಲ್ಲಿಟ್ಟ ಥರ್ಮಾಮೀಟರ್ ಬೆಂದುಹೋಗುವಷ್ಟು ಜ್ವರ ಬಂದಿದೆ... ನಿಮ್ಮವರು ಯಾರು ಅಡ್ಮಿಟ್ ಆಗಿದ್ದಾರೆ?’ ಕೇಳಿದಳು ಸುಮಿ.

‘ಸೊಳ್ಳೆ ಕಚ್ಚಿ ನಮ್ಮ ಫ್ಯಾಮಿಲಿಯೇ ಕಾಯಿಲೆಯಿಂದ ನೆಲ ಕಚ್ಚಿದೆ. 3ನೇ ಬೆಡ್‌ನಲ್ಲಿ ಅತ್ತೆ, 4ರಲ್ಲಿ ಮಗಳು, 5ರಲ್ಲಿ ಮಗ, 6ನೇ ಬೆಡ್‌ನಲ್ಲಿ ಗಂಡ ಮಲಗಿದ್ದಾರೆ’.

ADVERTISEMENT

‘ಅವರನ್ನು ಆರೈಕೆ ಮಾಡಲು ನೀವೊಬ್ಬರಾದರೂ ಆರೋಗ್ಯವಾಗಿದ್ದೀರಲ್ಲ...’

‘ಹೋದ ವರ್ಷ ಡೆಂಗಿ ಬಂದು ಇದೇ ಆಸ್ಪತ್ರೆಯಲ್ಲಿ ನಾನು ಅಡ್ಮಿಟ್ ಆಗಿದ್ದೆ, ನನ್ನ ಗಂಡ ಹಾಲು, ಗಂಜಿ ಕುಡಿಸಿ ಆರೈಕೆ ಮಾಡಿದ್ದರು. ಈ ವರ್ಷ ಆರೈಕೆ ಸರದಿ ನನ್ನದು’.

‘ಯುಗಾದಿ, ದೀಪಾವಳಿಯಂತೆ ಡೆಂಗಿ ವರ್ಷಾವರ್ಷಾನೂ ಬರುತ್ತಾ?!’

‘ಹೌದು. ಮಳೆಗಾಲ ಶುರುವಿನಲ್ಲಿ ಡೆಂಗಿ, ಮಲೇರಿಯಾದಂತಹ ಕಾಮನ್ ಕಾಯಿಲೆಗಳು ಬರುತ್ತವೆ. ಕಾಯಿಲೆಗಳು ಬರಲಿಬಿಡಿ, ಅವುಗಳಿಗೆ ನಮ್ಮನ್ನು ಬಿಟ್ಟರೆ ಇನ್ಯಾರು ಗತಿ? ಮಕ್ಕಳ ಸ್ಕೂಲ್ ಫೀಸು, ಹಬ್ಬದ ಖರ್ಚಿನಂತೆ ಕಾಯಿಲೆಗೂ ದುಡ್ಡು ಮೀಸಲಿಡುತ್ತೇವೆ’.

‘ಕಾಯಿಲೆಯಿಂದ ಗಾಬರಿ... ಚಿಕಿತ್ಸೆ ನೆಪದಲ್ಲಿ ರಾಬರಿ...’

‘ಗಾಬರಿ ಆಗ್ಬೇಡಿ, ಸೌಭಾಗ್ಯ ಬೇಡಿ ದೇವಸ್ಥಾನದ ಹುಂಡಿಗೆ ದುಡ್ಡು ಹಾಕುವಂತೆ ಆರೋಗ್ಯ ಬಯಸಿ ಆಸ್ಪತ್ರೆ ಹುಂಡಿಗೂ ನಾವು ಹಣ ಹಾಕಬೇಕು’.

‘ಹಬ್ಬ ಹರಿದಿನಗಳಲ್ಲಿ ಬಟ್ಟೆ ಅಂಗಡಿಗಳಲ್ಲಿ ರಿಯಾಯಿತಿ ಮಾರಾಟದಂತೆ ಕಾಯಿಲೆ ಕಾಲದಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವೆಚ್ಚಕ್ಕೆ ಡಿಸ್ಕೌಂಟ್ ಆಫರ್ ಇರಬೇಕಾಗಿತ್ತು...’ ಸುಮಿ ಆಸೆಪಟ್ಟಳು.

ಆಗ ನರ್ಸ್ ಬಂದು, ‘ಈಗ ಡಾಕ್ಟರ್ ರೌಂಡ್ಸ್ ಬರ‍್ತಾರೆ ಪೇಷೆಂಟ್ ಕಡೆಯವರು ಆಚೆ ಹೋಗಿ...’ ಎಂದು ಎಲ್ಲರನ್ನೂ ಕಳಿಸಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.