ADVERTISEMENT

ಚುರುಮುರಿ | ಕಪ್‌ ನಮ್ದೂ ಹೌದು!

ಬೆಕ್ಕಣ್ಣ ಸುದ್ದಿ ಓದುತ್ತ ಲೊಚ್‌ ಲೊಚ್‌ ಎನ್ನುತ್ತಿತ್ತು. 

ಸುಮಂಗಲಾ
Published 7 ಜುಲೈ 2024, 21:53 IST
Last Updated 7 ಜುಲೈ 2024, 21:53 IST
   

ಬೆಕ್ಕಣ್ಣ ಸುದ್ದಿ ಓದುತ್ತ ಲೊಚ್‌ ಲೊಚ್‌ ಎನ್ನುತ್ತಿತ್ತು. 

‘ಛೆ… ಪಾಪ… ನಮ್‌ ಮೂರ್ತಿ ಅಜ್ಜಾರ ಅಳಿಯ ರಿಷಿ ಅಂಕಲ್ಲು ಈ ಸಲ ಬ್ರಿಟನ್‌ ಪ್ರಧಾನಿ ಆಗೂದು ತಪ್ಪಿಹೋತು’ ಎಂದು ಮತ್ತೆ ಲೊಚ್‌ ಅಂದಿತು. 

‘ಹೋಗ್ಲಿಬಿಡು… ಅಬ್‌ ಕಿ ಬಾರ್ ಚಾರ್‌ ಸೌ ಪಾರ್‌ ಅನ್ನೋ ಘೋಷಣೆ ಬ್ರಿಟನ್ನಿನಲ್ಲಿ ನಿಜ ಆಗೈತಿ. ಲೇಬರ್‌ ಪಾರ್ಟಿಗೆ ನಾನೂರಕ್ಕಿಂತ ಹೆಚ್ಚು ಸೀಟು ಸಿಕ್ಕಾವಂತ’ ಎಂದೆ. 

ADVERTISEMENT

‘ಇಲ್ಲಿಂದ ಬೇಕಿದ್ರೆ ಆಪರೇಷನ್‌ ತಜ್ಞರನ್ನ ಕಳಿಸತಿದ್ದೆವು. ರಿಷಿ ಅಂಕಲ್ಲು ನಮ್‌ ಯೆಡ್ಯೂರಜ್ಜಾರು, ಕುಮಾರಣ್ಣನ ಕನ್ಸಲ್ಟನ್ಸಿ ಸರ್ವಿಸ್‌ ತಗೋಬೇಕಿತ್ತು. ಇವ್ರು ಆಪರೇಷನ್‌, ಮೈತ್ರಿ, ಹಿಂಗೆ ಏನರೆ ಮಾಡಿ ಅಂವನೇ ಪ್ರಧಾನಿ ಆಗೂ ಹಂಗ ಮಾಡತಿದ್ದರು’ ಬೆಕ್ಕಣ್ಣ ಕೈಕೈ ಹಿಸುಕಿಕೊಂಡಿತು. 

‘ಇಲ್ಲಿ ಮಾಡಿದಂಗೆ ಅಲ್ಲಿ ಯರ್‍ರಾಬಿರ್‍ರಿ ಆಪರೇಷನ್‌ ಎಲ್ಲ ಮಾಡೂ ಹಂಗಿಲ್ಲ. ಎಲ್ಲದಕ್ಕೂ ಭಯಂಕರ ಪ್ರೊಸೀಜರ್‍ರು ಇರತಾವು’ ಎಂದೆ. 

‘ಬಿಡು, ಏನಿದ್ದರೇನು… ನಮ್ಮವರು ರಂಗೋಲಿ ಕೆಳಗೆ ನುಸುಳೋ ಚಾಣಾಕ್ಷರು!’

‘ಅಲ್ಲಲೇ… ಇಲ್ಲಿ ಮಾತುಮಾತಿಗೆ ರಾಹುಲಂಕಲ್ಲಿಗೆ ಇಟಲಿಗೆ ವಾಪಸು ಹೋಗಪ್ಪ ಅಂತಾರಲ್ಲ… ಅಲ್ಲಿ ರಿಷಿದು ಐತಿಹಾಸಿಕ ಸೋಲಾದ್ರೂ ಇಂಡಿಯಾಕ್ಕೆ ವಾಪಸು ಹೋಗು ಅಂತ ಚುಚ್ಚಂಗಿಲ್ಲ… ಅವನ ಪಕ್ಷ ಸೋತ್ರೂ ಅಂವಾ ನಮ್ಮವನೇ ಅಂತ ಒಪ್ಪಿಕೊಂಡಾರೆ’.

‘ಒಂದು ತಿಳಕೋ… ನಮ್ಮವರು ಬ್ಯಾರೆ ದೇಶಕ್ಕೆ ಹೋಗಿ ನೆಲೆಸಿದ್ರೆ, ಇಲ್ಲಿಯವರು, ಅಲ್ಲಿಯವರು ಎರಡೂ ಆಗತಾರೆ. ಆದರೆ ಇಟಲಿ ಮೂಲದವರು ಮಾತ್ರ ಯಾವತ್ತಿಗೂ ಹೊರಗಿನವರೇ’.

‘ವಿತಂಡವಾದ ಮಾಡೂದನ್ನು ನಿನ್ನ ಹತ್ರ ಕಲೀಬೇಕು ನೋಡಲೇ’ ಎಂದು ನಾನು ತಲೆ ಚಚ್ಚಿಕೊಂಡೆ. 

‘ಸೂರ್ಯ ಮುಳುಗದ ಸಾಮ್ರಾಜ್ಯ ನಮ್ಮದು ಅಂತಿದ್ದರಂತೆ ಬ್ರಿಟಿಷರು. ರಿಷಿ ಅಂಕಲ್ಲು ಪ್ರಧಾನಿ ಆಗದಿದ್ದರೇನಂತೆ… ಈ ಸಲ ಒಟ್ಟು 26 ಮಂದಿ ಭಾರತೀಯ ಮೂಲದವರು ಬ್ರಿಟನ್‌ ಸಂಸದರು ಆಗ್ಯಾರೆ. ಹಿಂಗಾಗಿ ಕಪ್‌ ನಮ್ದೂ ಹೌದು!’ ಎಂದು ಬೆಕ್ಕಣ್ಣ ಹಲ್ಲು ಕಿರಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.