ADVERTISEMENT

ಚುರುಮುರಿ: ದ್ವೇಷದ ರಾಜಕಾರಣ!

ಬಿ.ಎನ್.ಮಲ್ಲೇಶ್
Published 16 ಜೂನ್ 2024, 23:30 IST
Last Updated 16 ಜೂನ್ 2024, 23:30 IST
   

ಹರಟೆಕಟ್ಟೆಗೆ ಸೈಕಲ್‌ನಲ್ಲಿ ಬಂದಿಳಿದ ಗುಡ್ಡೆಯನ್ನು ನೋಡಿ ದುಬ್ಬೀರ ‘ಏನ್ಲೇ ಇದು ಸೈಕಲ್ಲು... ಬೈಕ್ ಏನ್ ಮಾಡ್ದೆ?’ ಎಂದ.

‘ಪೆಟ್ರೋಲ್ ರೇಟು ಜಾಸ್ತಿ ಆತಲ್ಲಪಾ. ಅದ್ಕೆ ಸೈಕಲ್ ಹೊರಕ್ಕೆ ತೆಗೆದಿದೀನಿ’ ಗುಡ್ಡೆ ನಕ್ಕ.

‘ಇಷ್ಟ್ ದಿನ ಸೆಂಟ್ರಲ್‌ನೋರ ಬಯ್ತಿದ್ರಿ, ಈಗ ಯಾರ‍್ನ ಬಯ್ತಿಯೋ ಗುಡ್ಡೆ?’ ಮಂಜಮ್ಮ ಕೆಣಕಿದಳು.

ADVERTISEMENT

‘ನಿನ್ನೇ ಬೈಬೇಕು, ಲೋಕಸಭೆ ಎಲೆಕ್ಷನ್ನಲ್ಲಿ ನೀನು ವೋಟ್ ಹಾಕಿ ನಮ್ ಪಾರ್ಟಿ ಗೆಲ್ಲಿಸಿದ್ದಿದ್ರೆ ಇವತ್ತು ಪೆಟ್ರೋಲ್ ರೇಟು ಜಾಸ್ತಿ ಆಗ್ತಿದ್ದಿಲ್ಲ’.

‘ಅಂದ್ರೇ ಈಗ ಒಂಬತ್ತು ಕಡಿ ಗೆದ್ದಿದೀರಲ್ಲ, ಅಲ್ಲೆಲ್ಲ ಪೆಟ್ರೋಲ್‌ನ ಕಮ್ಮಿ ರೇಟಿಗೆ ಕೊಡ್ತಿದೀರಾ?’

‘ಅದೆಂಗೆ ಕೊಡಕೆ ಬರ್ತತಿ? ಒಬ್ರಿಗೆ ಆಗಿದ್ದು ಎಲ್ರಿಗೆ’.

‘ಇದು ಅನ್ಯಾಯ ಕಣಲೆ, ನಾವೆಲ್ಲ ವೋಟ್ ಹಾಕಿದೀವಿ, ನಮ್ಗೂ ಯಾಕೆ ಬರೆ?’ ತೆಪರೇಸಿ ಆಕ್ಷೇಪಿಸಿದ.

‘ನಿಮ್ಗೆಲ್ಲ ಎಣ್ಣಿ ರೇಟು ಕಡಿಮಿ ಮಾಡಿದೀವಲ್ಲ, ಪೇಪರ್ ನೋಡ್ಲಿಲ್ವಾ?’

‘ಅದು ಜಾಸ್ತಿ ರೊಕ್ಕಿದ್ದೋರು ಕುಡಿಯೋ ಕಾಸ್ಟ್‌ಲೀ ಎಣ್ಣೆ’.

‘ಇದು ದ್ವೇಷದ ರಾಜಕಾರಣ, ನಾ ಒಪ್ಪಲ್ಲ’ ಮಂಜಮ್ಮ ವಾದಿಸಿದಳು.

‘ದ್ವೇಷದ ರಾಜಕಾರಣನಾ? ಆತುಬಿಡು, ನೀನು ಕಲಬೆರಕೆ ಚಾಪುಡಿ ಹಾಕಿ ಚಾ ಮಾಡ್ತಿ ದೀಯ ಅಂತ ಕೇಸ್ ಹಾಕ್ಸಿ ಒಳಗೆ ಹಾಕಿಸ್ತೀನಿ’.

‘ನಿಂಗೆ ಧಮ್ಮಿದ್ರೆ, ತಾಕತ್ತಿದ್ರೆ ಹಾಕ್ಸೋ ನೋಡಾಣ’ ಮಂಜಮ್ಮ ಸಿಟ್ಟಿಗೆದ್ದಳು.

‘ನಂಗೆ ದಮ್ಮು, ಅಸ್ತಮ ಏನಿಲ್ಲ, ಹೋಗ್ಲಿ ಎಲ್ರಿಗೂ ಚಾ ಹಾಕು’ ಗುಡ್ಡೆ ಮೆತ್ತಗಾದ.

‘ಇವತ್ತಿಂದ ಚಾ ರೇಟು ಜಾಸ್ತಿ. ಪೆಟ್ರೋಲ್ ರೇಟು ಜಾಸ್ತಿ ಆಗೇತಲ್ಲ’.

‘ಅಲೆ ಇವ್ನ, ಪೆಟ್ರೋಲ್‌ಗೂ ನಿನ್ ಚಾಗೂ ಏನ್ ಸಂಬಂಧ?’

‘ಸಂಬಂಧ ಐತಿ, ಪೆಟ್ರೋಲ್ ರೇಟ್ ಜಾಸ್ತಿ ಆದ್ರೆ ಆಟೊದೋರು ಜಾಸ್ತಿ ರೊಕ್ಕ ಕೇಳ್ತಾರೆ. ತರಕಾರಿ, ಹಾಲು ಎಲ್ಲ ದುಬಾರಿ ಆಗ್ತಾವು. ಮತ್ತೆ ನಾ ಹೋಟ್ಲು ನಡೆಸೋದೆಂಗೆ?’

ಗುಡ್ಡೆ ಪಿಟಿಕ್ಕನ್ನಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.