ADVERTISEMENT

ಚುರುಮುರಿ: ನಿದ್ದೆ ಗೆದ್ದ ಇಲಿ

ನಾರಾಯಣ ರಾಯಚೂರ್
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
   

‘ರೀ... ಈ ವರ್ಷದ ಫೆಬ್ರುವರಿ ತಿಂಗಳ ವಿಶೇಷ ಏನು ಹೇಳಿ?’

‘ಕಾಲೇಜಿನ ದಿನಗಳಾಗಿದ್ದರೆ, ವ್ಯಾಲೆಂಟೈನ್ಸ್‌ ಡೇ ಬರೋ ತಿಂಗಳು ಅಂತ ಹೇಳ್ತಿದ್ದೆ. ಈಗ, ಗಿಂಬಳದ ರೂಪದಲ್ಲಿ ದಿನದ ಮೇಲಾದಾಯ ಬರೋರಿಗೆ ಇದು ಕಡಿಮೆ ಆದಾಯ ತರೋ ತಿಂಗಳು ಅಂತ ಹೇಳೋದನ್ನು ಕೇಳಿಸಿಕೊಂಡಿದ್ದೇನೆ’.

‘ಅದಲ್ಲಾರೀ... ಇದು ‘ಲೀಪ್ ಇಯರ್’ ಅಲ್ವೇನ್ರೀ?! ಈ ಸಾರಿ ಇಪ್ಪತ್ತೊಂಬತ್ತು ದಿನ- ಒಂದು ದಿನ ಬೋನಸ್. ಹಾಗೆ ನೋಡಿದರೆ ಅವರೂ ಖುಷಿ ಪಡೋ ವರ್ಷಾನೇ ಇದು. ಕೇಂದ್ರ, ರಾಜ್ಯದ ಬಜೆಟ್ ಮಂಡನೆ ಆಗೋ ತಿಂಗಳು ಇದು. ನಮ್ಮ ನಿರ್ಮಲಕ್ಕ ಈ ಬಾರಿ ಯಾವ್ ಸೀರೆ ಉಟ್ಕೊಂಡು ಬರ್ತಾರೋ ನೋಡ್ಬೇಕು’.

ADVERTISEMENT

‘ಈ ಬಜೆಟ್ಟು, ಘರ್‌ವಾಪ್ಸಿ, ಪಕ್ಷಾಂತರ ಪರ್ವ... ಇವೆಲ್ಲ ಸಾಕಾಗಿದೆ. ಇಲ್ಲಿ ನೋಡು ಒಂದು ಇಂಟರೆಸ್ಟಿಂಗ್ ಮಾಹಿತಿ- ಆಸ್ಟ್ರೇಲಿಯಾದಲ್ಲಿ ಒಂದು ವಿಶಿಷ್ಟ ತಳಿಯ ಇಲಿ, ತನ್ನ ಪ್ರೇಯಸಿಗಾಗಿ ನಿದ್ದೆಯನ್ನೇ ತ್ಯಾಗ ಮಾಡುತ್ತಂತೆ!’

‘ಪ್ರಾಣ ಕೊಡ್ತೀನಿ ಅಂತ ಹೇಳೋ ಪ್ರಿಯಕರರ ದಂಡೇ ಇರುತ್ತೆ. ಕೊಡ್ತಾರೋ ಬಿಡ್ತಾರೋ, ನಿದ್ದೆ ಬಿಡೋದು ಅಷ್ಟು ಸುಲಭ ಅಲ್ಲಾರೀ. ಪರವಾಗಿಲ್ಲ ಈ ಇಲಿಗೆ ಒಂದ್ ಲೈಕ್ ಕೊಡಲೇಬೇಕು’.

‘ಪ್ರಾಣಿಗಳಲ್ಲಿ ನಿದ್ದೆ ಬಿಡೋ, ಕಡಿಮೆ ನಿದ್ದೆ ಮಾಡೋ ಪ್ರಾಣಿಗಳು ಇವೆಯಂತೆ. ಆದರೆ ಇದರಂತೆ ಪ್ರೇಯಸಿಗಾಗಿಯೇ ನಿದ್ದೆ ಬಿಡೋ ಪ್ರಾಣಿಗಳು ಅತಿ ವಿರಳವಂತೆ’.

‘ಗ್ರೇಟ್ ರ್‍ಯಾಟ್ ರೀ ಅದು. ನೀವೂ ಇದ್ದೀರ, ಕುಂಭಕರ್ಣ. ನಿದ್ದೆ ಬಿಡೋದಿರ್‍ಲಿ, ಗೊರ್ಕೆ ಹೊಡೆದೂ ಹೊಡೆದೂ ಪಕ್ಕದಲ್ಲಿರೋರ ನಿದ್ದೆಗೂ ತೊಂದ್ರೆ ಮಾಡ್ತೀರ’.

‘ನಮ್ಮ ಹಾಗೆ ದಿನವಿಡೀ ಧಾವಂತ, ಟ್ರಾಫಿಕ್ಕು, ಆಫೀಸಿನ ರಗಳೆ ಎಲ್ಲ ಅನುಭವಿಸಿದ್ದರೆ ಗೊತ್ತಾಗುತ್ತಿತ್ತು ಆ ಇಲಿಯ ಗ್ರೇಟ್‌ನೆಸ್ಸು. ವಿಜ್ಞಾನಿಗಳು ಈ ಗಂಡು ಇಲಿ ಬಗ್ಗೆ ಮಾತ್ರ ಹೇಳಿದಾರೆ, ಆ ತಳಿಯ ಹೆಣ್ಣು ಇಲಿಗಳ ಗುಣಗಳನ್ನೂ ತಿಳಿಸಿದ್ದರೆ...’

‘ಇನ್ನೇನು ತಿಳಿಸೋದು, ಒಳ್ಳೆಯ ರೂಪ, ಗುಣ ಇರೋದಕ್ಕೇ ಫಾಲೋ ಮಾಡ್ಕೊಂಡು ಬರೋದು, ನಿದ್ದೇನೂ ಬಿಟ್ಟು!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.