‘ಸಾ, ಸ್ಟೇಟು- ಸೆಂಟ್ರಲ್ ಬಜೆಟ್ಟು ಜನಕೆ ಏನೇನೋ ಕೊಟ್ಟೇವು ಅಂತ ಆಸೆ ಹುಟ್ಟಿಸವಲ್ಲ, ನಮ್ಮಗಂಟಾ ಬಂದಾವೇ ಅಂತ!’ ನನ್ನ ಅನುಮಾನವನ್ನ ತುರೇಮಣೆಗೆ ಹೇಳಿಕೊಂಡೆ.
‘ನೋಡ್ಲಾ, ನಮ್ಮ ಬಜೆಟ್ಟು ದೊಡ್ಡೋರ ಮನೆ ಊಟ-ಸಂಪತ್ತಿದ್ದಂಗೆ ಕೇಳಕಷ್ಟೇ ಚಂದ!’ ಅಂದ್ರು.
‘ದೊಡ್ಡೋರ್ ಮನೆ ಊಟ ಹ್ಯಂಗಿದ್ದದಯ್ಯಾ?’ ಅಂತು ಯಂಟಪ್ಪಣ್ಣ.
‘ಒಬ್ಬರು ಬಡ ರಾಜಕಾರಣಿ 40 ಕ್ವಾಣೆ ಮನೆಗೋಗಿದ್ದೋ. ಅವುರೆಂಡ್ರು ಬಂದು ಉಪಚಾರ ಮಾಡಿದ್ರು ‘ಅಣೈ ಚೀನಾ ಟೀ ಕುಡದೀರಾ?’ ಅಂದ್ರು. ನಾವು ‘ಚೀನಾ ಟೀ ಕುಡುದ್ರೆ ಕೊರೊನಾ ಬತ್ತದೆ, ಕಾಪಿ ಕೊಡಿ’ ಅಂದೋ. ‘ಅಣೈ, ಕಾಪೀಗೆ ಎಮ್ಮ ಹಾಲಾಕನೋ, ಹಸೀನ ಹಾಲಾಕನೋ?’ ಅಂತ ಕೇಳ್ತು. ‘ಹಸಿಂದೇ ಹಾಕಿ ಕಾಪಿ ಚೆನ್ನಾಗಿರತದೆ’ ಅಂದೋ ಕಲಾ’ ಅಂದ್ರು.
‘ಕಾಪಿ ಚೆನ್ನಾಗಿತ್ತೇನೋ?’ ಅಂದೆ ನಾನು. ‘ಕಾಪಿಗೆ ನಂದಿನಿ ಹಾಲೋ, ಇಲ್ಲಾ ನಾಟಿ ಹಸಿಂದಾ?’ ಅಂತಂದ್ರು. ‘ನಂದಿನಿ ಹಾಲೇ ಹಾಕವ್ವ’ ಅಂದೋ. ‘ಯಣ್ಣ ಸಕ್ಕರೆ ಹಾಕ್ಲಾ, ಮಂಡೇದ ಬೆಲ್ಲ ಹಾಕ್ಲಾ’ ಅಂತ ಕೇಳಿದ್ರು. ‘ನಮಗೇನು ಸಕ್ಕರೆ ಕಾಯಿಲೆ ಇಲ್ಲ. ಕಾಪಿ ಬ್ಯಾಡಿ ಬಸ್ಸಿಗೆ ಲೇಟಾತದೆ. ಒಂದ್ಲೋಟ ನೀರು ಕೊಡಿ ಸಾಕು’ ಅಂದುದ್ಕೆ ‘ನೀವು ನಮ್ಮ ಕಳ್ಳು-ಬಳ್ಳಿ ಇದ್ದಂಗೆ. ಯಾವ ನೀರು ಕುಡದೀರಿ ತುರೇಮಣೆಣ್ಣ, ಹಿಮಾಲಯದ ಮಿನರಲ್ ವಾಟರ್ ಕೊಡನಾ, ಕೆಂಗೇರಿ ಪೆಸಲ್ ವಾಟರ್ ಆತದ’ ಅಂದ್ರು.
‘ಬಾಯಾರಿ ಸಾಯತಿವ್ನಿ ಕನಕ್ಕಾ’ ಅಂದೆ ಸಿಟ್ಟಲ್ಲಿ. ‘ಸಿಟ್ಕಬ್ಯಾಡಿ, ಸರ್ಕಾರಿ ಆಸ್ಪತ್ರಿನಾಗೆ ಸತ್ತೀರಾ ಇಲ್ಲಾ ಮನೇಗೋಗಿ ಸತ್ತೀರಾ?’ ಅಂದ್ರು. ನಾವು ಅಲ್ಲಿಂದ ಎದ್ದು ವಾಟ ಕಿತ್ತೋರು ಊರಿಗೆ ಬಂದೇ ನೀರು ಕುಡಿದಿದ್ದು ಕನೋ! ನಮ್ಮ ಬಜೆಟ್ಟೂ ಹಿಂಗೀಯೆ. ಬರೂದು ಗೊತ್ತಾಯ್ತದೆ, ಹೋದದ್ದು ಕಾಣಕ್ಕೇ ಇಲ್ಲ. ಸಂಪತ್ತೆಲ್ಲಾ ಬಿಲಿಯನೇರುಗಳ ಬಿಲ ಸೇರಿಕ್ಯಂಡಮೇಲೆ, ನಮಗೆ ಹರಿದೋಗಿರ ಹಳೇ ಚಡ್ಡಿನೇ ಗತಿ ಕಾ ಮೂದೇಯ್!’ ಅಂದು ಮಾತು ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.