ADVERTISEMENT

ಚುರುಮುರಿ | ಎವ್ರಿಬಡಿ ಲವ್ಸ್‌...

ಮಲ್ಲಿಕಾರ್ಜುನ ಗುಮ್ಮಗೋಳ
Published 31 ಜುಲೈ 2020, 22:02 IST
Last Updated 31 ಜುಲೈ 2020, 22:02 IST
ಚುರುಮುರಿ
ಚುರುಮುರಿ   

ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ಸೀದಾ ತನ್ನ ಹಳ್ಳಿಗೆ ಬಂದು ಬಿದ್ದ ಮಲ್ಲೇಶಿಗೆ ನಿದ್ದೆಯ ಮಂಪರು. ಆದರೆ ಒತ್ತಡಬಾಧೆ ಕೇಳಬೇಕಲ್ಲ? ನಸುಕಿನಲ್ಲಿ ಕಣ್ಣು ತಿಕ್ಕುತ್ತ ತಂಬಿಗೆ ಹಿಡಿದು ಅಗಸಿಯ ಕಡೆಗೆ ಓಡಿದ. ದೂರದಲ್ಲೆಲ್ಲೋ ಚೀರಾಟದ ಸದ್ದು! ತನ್ನ ಬಾಧೆ ಭರಾಟೆ ತೀರಿಸಿಕೊಂಡು, ಮೂಗು ಮುಚ್ಚಿಕೊಂಡು ಆ ಕಡೆ ಹೋಗಿ ನೋಡುತ್ತಾನೆ. ರಣಹದ್ದುಗಳ ದೊಡ್ಡ ಹಿಂಡು ಸೇರಿ ಹಬ್ಬ ಮಾಡುತ್ತಿದೆ.

ಹೆಣ ತಿನ್ನುವ ರಣಹದ್ದುಗಳ ಸಂತತಿ ಅವಸಾನವಾಗಿ, ಈಗೇನಿದ್ದರೂ ಹಣ ತಿನ್ನುವ ರಣಹದ್ದುಗಳೇ ಹೆಚ್ಚಾಗಿವೆ ಎಂದು ತಿಳಿದಿದ್ದ ಮಲ್ಲೇಶಿಗೆ, ರಣಹದ್ದುಗಳನ್ನು ನೋಡಿ ಭಲೇ ಖುಷಿಯಾಯಿತು. ಈ ಕಾಲದಲ್ಲಿ ಹೆಣ ಪಡೆಯಲೂ ಹಣ, ಸುಡಲೂ ಹಣ ಕೊಡಬೇಕು. ಪಾಪ, ಈ ರಣಹದ್ದುಗಳ ಮುಂದೆ ಕಳೇಬರವನ್ನು ಇಟ್ಟರೆ ಸಾಕು, ತಿಂದು ಶವಸಂಸ್ಕಾರವನ್ನು ಅತ್ಯಂತ ಕ್ಲೀನಾಗಿ ಮಾಡುತ್ತವೆ. ಎಂತಹ ಉಪಕಾರಿಗಳು ಎಂದುಕೊಳ್ಳುತ್ತ ಮನೆಯ ಕಡೆಗೆ ಬಂದ.

ಚಹಾ ಕುಡಿಯುತ್ತ ದಿನಪತ್ರಿಕೆಯ ಮೇಲೆ ಕಣ್ಣಾಡಿಸುತ್ತಾನೆ. ‘ಕೊರೊನಾ ಉಪಕರಣ ಖರೀದಿಯಲ್ಲಿ ಭಾರಿ ಹಗರಣ. ನ್ಯಾಯಾಂಗ ತನಿಖೆಗೆ ವಿರೋಧ ಪಕ್ಷಗಳ ಬಿಗಿಪಟ್ಟು’ ಎಂಬ ತಲೆಬರಹ ಓದಿ, ತಲೆಬಿಸಿಯಾಗಿ ಪೇಪರ್ ಮಡಿಚಿಟ್ಟು ಟಿ.ವಿ ಹಚ್ಚುತ್ತಾನೆ. ‘ಹೆಣ ಕೊಡಲು ಹಣ ಕೇಳುತ್ತಿರುವ ರಣಹದ್ದುಗಳು. ಖಾಸಗಿ ಆಸ್ಪತ್ರೆಯ ಕರ್ಮಕಾಂಡ’ ಎಂದು, ಬಿಗ್ ಬ್ರೇಕಿಂಗ್ ನ್ಯೂಸ್. ಹಿನ್ನೆಲೆಯಲ್ಲಿ ಠಳ್ ಠಳ್ ಎಂದು ಬಾಟಲಿ ಒಡೆದ ಸದ್ದು, ಢಢಣ್ ಢಢಣ್ ಎಂಬ ಮ್ಯೂಜಿಕ್.

ADVERTISEMENT

ಪಾಪ, ಸತ್ತ ಪ್ರಾಣಿಗಳನ್ನು ತಿಂದು ತನ್ನ ಹೊಟ್ಟೆ ಹೊರೆಯುವ ನಿರುಪದ್ರವಿ ರಣಹದ್ದಿನ ಹೆಸರನ್ನು ಹಣ ತಿನ್ನುವವರಿಗೆ ಹೋಲಿಸಿದ್ದು ನೋಡಿ ಮನಸ್ಸಿಗೆ ನೋವಾಗಿ ಟಿ.ವಿ ಬಂದ್ ಮಾಡಿದ.

ಮನೆಯಲ್ಲಿ ಹೊತ್ತು ಹೋಗದೆ ಮಲ್ಲೇಶಿ ಗ್ರಂಥಾಲಯದ ಕಡೆಗೆ ಹೆಜ್ಜೆ ಹಾಕಿದ. ‘ಎವ್ರಿಬಡಿ ಲವ್ಸ್ ಗುಡ್ ಡ್ರಾಟ್’ ಪುಸ್ತಕವನ್ನು ಗ್ರಂಥಪಾಲಕ ಓದಲು ಕೊಟ್ಟ. ಓದಿದ ಮಲ್ಲೇಶಿಗೆ ತಲೆ ಗಿರ್ ಎಂದಿತು. ‘ಎವ್ರಿಬಡಿ ಲವ್ಸ್ ಗುಡ್ ಕೊರೊನಾ’ ಎಂಬ ಪುಸ್ತಕ ಬರೆಯುವ ಮನಸ್ಸಾಗಿ ಮನೆಗೆ ಓಡಿಬಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.