ADVERTISEMENT

ಚುರುಮುರಿ: ಜೂನಿಯರ್ಸ್‌ ಕವಿಗೋಷ್ಠಿ

ಗುರು ಪಿ.ಎಸ್‌
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
   

ಬೆರಳುಗಳಲ್ಲಿ ಪೆನ್ನು ಹಿಡಿದು, ಅದನ್ನು ಕೆನ್ನೆಯ ಮೇಲಿಟ್ಟುಕೊಂಡು ಕವಯತ್ರಿಯಂತೆ ಮೊಬೈಲ್‌ನಲ್ಲಿ ಫೋಟೊ ತೆಗೆದುಕೊಳ್ಳುತ್ತಿದ್ದಳು ಹೆಂಡತಿ.

‘ಇದೇನಿದು ನಿನ್ನ ಹೊಸ ಅವತಾರ, ಯಾಕೆ ಹೀಗೆಲ್ಲ ಫೋಟೊ ತೆಗೆದುಕೊಳ್ತಿದೀಯ’ ಕೇಳಿದೆ.

‘ದಸರಾ ಕವಿಗೋಷ್ಠಿಗೆ ಹೋಗ್ತಿದೀನಿ ರೀ’

ADVERTISEMENT

‘ಹೊಸಬರಿಗೆಲ್ಲ ಅಲ್ಲಿ ಅವಕಾಶವಿಲ್ಲ’.

‘ನನ್ನ ಹಾಗೆ ಸಂವೇದನಾಶೀಲರಾಗಿ ರುವ ಕೆಲವು ಹಿರಿಯರು ಕವಿಗೋಷ್ಠಿಯಿಂದ ಹಿಂದೆ ಸರಿದಿದ್ದಾರೆ, ಅವರ ಬದಲು ನಾನು ಹೋಗ್ತಿದೀನಿ’ ಎಂದಳು.

‘ಯಾವ ರೀತಿಯ ಕವನ ಓದ್ತೀಯ ಅಲ್ಲಿ?’

‘ಸಾಮಾಜಿಕ ಸಂವೇದನೆಗಳನ್ನುಳ್ಳ ಕವನಗಳನ್ನು ಓದಬೇಕೆಂದಿದ್ದೇನೆ’.

‘ನಿನ್ನ ಸಂವೇದನೆ–ವೇದನೆ ಎಲ್ಲ ಯಾರೂ ಕೇಳಲ್ಲ. ‌ಪಾಲಿಟಿಕ್ಸ್‌ ಕುರಿತು ಹೇಳಬೇಕಲ್ಲಿ’.

‘ಅದಕ್ಕೂ ಪ್ರಿಪೇರ್ ಆಗಿದೀನಿ ರೀ...’

‘ಹೌದಾ, ಹೇಳು ನೋಡೋಣ’.

‘ಚುನಾವಣಾ ರಿಸಲ್ಟು ಬರಬೇಕು ಹೀಗೆ, ನಿರೀಕ್ಷೆಗಳೆಲ್ಲ ಸುಳ್ಳಾಗುವ ಹಾಗೆ... ಹೇಗಿದೆ ರೀ’.

‘ಕವನ ತುಂಬಾ ಸಪ್ಪೆ ಆಯ್ತು, ಕಿಕ್ ಇರಲಿ’.

‘ವಾಷಿಂಗ್‌ಮಷೀನ್ ಬಗ್ಗೆ ಹೇಳ್ತೀನಿ’.

‘ಮತ್ತೂ, ನಿನ್ನ ಮನೆ ವಿಷಯವೇ ಆಯ್ತಲ್ಲ’

‘ಸ್ವಲ್ಪ ಸಮಾಧಾನವಾಗಿ ಕೇಳ್ರೀ, ಇದು ಬಟ್ಟೆ ಒಗೆಯುವ ಮಷೀನ್‌ ಅಲ್ಲ, ನಾಯಕರನ್ನ ಕ್ಲೀನ್ ಮಾಡೋ ಮಷೀನ್’.

‘ಹಾಗಾ? ಹೇಳು, ಹೇಳು...’

‘ಇದು ಮಾಯಾ ವಾಷಿಂಗ್‌ಮಷೀನು, ಇದು ತೊಳೆಯುತ್ತದೆ ಕಪ್ಪುಚುಕ್ಕೆಯ ಕಲೆಯನ್ನು ಮಾತ್ರವಲ್ಲ, ಬಿಳಿಚುಕ್ಕೆಯ ಕಲೆಯನ್ನೂ... ಆದರೆ, ಒಂದೇ ಒಂದು ಕಂಡೀಷನ್ನು, ನೀವು ಸೇರಬೇಕು ಈ ಪಕ್ಷ ಬಿಟ್ಟು ಆ ಪಕ್ಷವನ್ನು...’

‘ಅಯ್ಯೋ, ಇದೆಲ್ಲ ಹೇಳಿದರೆ ನಿನಗೆ ಅವಕಾಶವೇ ಸಿಗಲ್ಲ. ನೀನು ಹೇಳುವ ಕವನ ಹೃದಯ ಮೆಚ್ಚುವಂತಿರಬೇಕು, ಹೃದಯವನ್ನು ಚುಚ್ಚುವಂತಿರಬಾರದು’.

‘ಹಾಗಾದ್ರೆ ಇದು ಕೇಳಿ... ಕವನದ ಶೀರ್ಷಿಕೆ ಬಹುಪರಾಕ್‌...’

‘ಸ್ಟಾಪ್, ಮುಂದೆ ಹೇಳೋದೇ ಬೇಡ. ಇದು ಕ್ಲಿಕ್‌ ಆಗುತ್ತೆ ಹೋಗಿ ಬಾ...’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.