ADVERTISEMENT

ಚುರುಮುರಿ: ಆಫರ್ ಮೇಳ

ಮಣ್ಣೆ ರಾಜು
Published 14 ಫೆಬ್ರುವರಿ 2023, 20:15 IST
Last Updated 14 ಫೆಬ್ರುವರಿ 2023, 20:15 IST
   

‘ಡಿಸ್ಕೌಂಟ್ ಅಂದ್ರೆ ಜನ ಮುಗಿಬೀಳ್ತಾರೆ ಕಣ್ರೀ...’ ನ್ಯೂಸ್ ಪೇಪರ್ ಓದುತ್ತಾ ಸುಮಿ ಹೇಳಿದಳು.

‘ಹೌದು, ಹಬ್ಬದ ಸಂದರ್ಭದಲ್ಲಿ ಸೀರೆ ಸೇಲ್ಸ್‌ನಲ್ಲಿ ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟ್ ಇದೆ ಅಂತ ನೀನು ಆಫರ್‌ಗೆ ಆಸೆಪಟ್ಟು ಸೀರೆ ಅಂಗಡಿಯ ನೂಕುನುಗ್ಗಲಲ್ಲಿ ನುಗ್ಗಾಡಿ, ಉಟ್ಟ ಸೀರೆ ಹರಿದುಕೊಂಡು ಬಂದೆಯಲ್ಲಾ...’ ಅಂದ ಶಂಕ್ರಿ.

‘ನನ್ನದಿರಲಿ, ಟ್ರಾಫಿಕ್ ದಂಡ ಪಾವತಿಗೆ ಐವತ್ತು ಪರ್ಸೆಂಟ್ ಡಿಸ್ಕೌಂಟ್‌ ಸಿಕ್ಕಮೇಲೆ ಕೋಟ್ಯಂತರ ರೂಪಾಯಿ ಕಲೆಕ್ಷನ್ ಆಗಿದೆಯಂತೆ. ಹಬ್ಬದ ಸೀಸನ್‍ನಲ್ಲೂ ಸೀರೆ, ಒಡವೆ ಅಂಗಡಿಗಳಲ್ಲಿ ಇಷ್ಟೊಂದು ಬಿಸಿನೆಸ್ ಆಗಿರಲಾರದು’.

ADVERTISEMENT

‘ಸರ್ಕಾರ ಆಗಿಂದಾಗ್ಗೆ ಇಂತಹ ಆಫರ್ ಮೇಳ ಆಯೋಜಿಸಿ, ಎಲೆಕ್ಟ್ರಿಕಲ್ ಬಿಲ್ ಪಾವತಿಸಿದರೆ ವಾಟರ್ ಬಿಲ್ ಫ್ರೀ, ಪೆಟ್ರೋಲ್ ಖರೀದಿಸಿದರೆ ಅಡುಗೆ ಅನಿಲ ಉಚಿತ ಅನ್ನುವಂಥ ಆಫರ್ ನೀಡಬೇಕು. ದಿನಬಳಕೆ ಪದಾರ್ಥಗಳಿಗೆ ಐವತ್ತು ಪರ್ಸೆಂಟ್ ಡಿಸ್ಕೌಂಟ್ ಕೊಟ್ಟರೆ ನಾವು ಆನಂದವಾಗಿ ಖರೀದಿಸಬಹುದು’.

‘ಪದಾರ್ಥಗಳ ಬೆಲೆಯನ್ನು ಎರಡು ಪಟ್ಟು ಏರಿಸಿ ಐವತ್ತು ಪರ್ಸೆಂಟ್ ಆಫರ್ ಕೊಟ್ಟರೆ ಪ್ರಯೋಜನವಿಲ್ಲ...’

‘ಮೋದಿಯವರು ಧರಿಸಿದ್ದರಲ್ಲಾ... ನಿರುಪಯೋಗಿ ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ಜಾಕೆಟ್ ಚೆನ್ನಾಗಿತ್ತು ಅಲ್ವೇನ್ರೀ?’

‘ಹೌದು, ಭೂಮಿಗೆ ಭಾರ, ಮಣ್ಣಿಗೆ ಮಾರಕವಾಗಿದ್ದ ಪ್ಲಾಸ್ಟಿಕ್ ಮರುಬಳಕೆಗೆ ಇನ್ನುಮುಂದೆ ಹೆಚ್ಚಿನ ಮಾನ್ಯತೆ ಸಿಗಬಹುದು, ತ್ಯಾಜ್ಯವೆಂದು ಕಡೆಗಣಿಸಿದ್ದ ಪ್ಲಾಸ್ಟಿಕ್ ಪೂಜ್ಯವಾಗಬಹುದು. ಪ್ಲಾಸ್ಟಿಕ್ ಜವಳಿ ಉದ್ಯಮಕ್ಕೆ ಉತ್ತೇಜನ ಸಿಗಬಹುದು’.

‘ಪ್ಲಾಸ್ಟಿಕ್ ಜವಳಿ ಮಾರುಕಟ್ಟೆಗೆ ಬಂದರೆ ಹಬ್ಬಕ್ಕೆ ನಾನೂ ಹೊಸ ಡಿಸೈನಿನ ಸೀರೆ ಕೊಳ್ಳುತ್ತೇನೆ, ನೀವೂ ಪ್ಲಾಸ್ಟಿಕ್ ಷರ್ಟ್, ಪ್ಯಾಂಟ್ ಕೊಂಡುಕೊಳ್ಳಿ’.

‘ಪ್ಲಾಸ್ಟಿಕ್ ನಿಷೇಧಿಸಿ ಅಂತ ರೇಷ್ಮೆ, ಹತ್ತಿ ಬೆಳೆಗಾರರು ಹೋರಾಟ ಶುರು ಮಾಡಬಹುದು’.

‘ಪರ್ಯಾಯ ಬೆಳೆ ಬೆಳೆಯಲು ಸರ್ಕಾರ ಪರ್ಯಾಯ ಯೋಜನೆಗಳನ್ನ ರೂಪಿಸಿ ಬೆಳೆಗಾರ ರಿಗೆ ನೆರವಾಗುತ್ತದೆ ಬಿಡ್ರೀ...’ ಅಂದಳು ಸುಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.