ADVERTISEMENT

ಚುರುಮುರಿ: ‘ಸಿರಿ ನಗರಂ’ ಗೆಲ್ಗೆ!

ನಾರಾಯಣ ರಾಯಚೂರ್
Published 26 ಏಪ್ರಿಲ್ 2023, 20:31 IST
Last Updated 26 ಏಪ್ರಿಲ್ 2023, 20:31 IST
ಚುರುಮುರಿ: ‘ಸಿರಿ ನಗರಂ’ ಗೆಲ್ಗೆ!
ಚುರುಮುರಿ: ‘ಸಿರಿ ನಗರಂ’ ಗೆಲ್ಗೆ!   

ನಾರಾಯಣ ರಾಯಚೂರ್

‘ನೋಡಿದೆಯೆನೇ ಬೆಂಗಳೂರಿನ ಭಾಗ್ಯವಾ?’ ಭಾರತದ ಮೂರನೇ ‘ಸಿರಿ ನಗರ’ ಬೆಂಗಳೂರಂತೆ!’

‘ಗಿರಿ ನಗರ ಗೊತ್ತು, ಅಮ್ಮನ ಮನೆ ಅಲ್ಲೇ ಅಲ್ವಾ? ಇದು ಯಾವುದುರೀ ಸಿರಿ ನಗರ! ಸಿರಿ ಧಾನ್ಯವೋ? ಸಿರಿ ನಗರವೋ?’

ADVERTISEMENT

‘ಲಂಡನ್ನಿನ ಒಂದು ಸಮೀಕ್ಷಾ ಸಂಸ್ಥೆ ಪ್ರತಿವರ್ಷ ಶ್ರೀಮಂತ ರಾಷ್ಟ್ರ–ನಗರಗಳ ಪಟ್ಟಿ ತಯಾರು ಮಾಡುತ್ತಂತೆ. ಈ ವರ್ಷ ಭಾರತದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮುಂಬೈ, ಡೆಲ್ಲಿ ಬಿಟ್ಟರೆ ನಮ್ಮ ಬೆಂಗಳೂರಿಗೆ ಮೂರನೇ ಸ್ಥಾನ ಕಣೇ’.

‘ಮೊನ್ನೆ ವಿಶ್ವ ‘ಜನಸಂಖ್ಯೆ ಪಟ್ಟಿ’ಯಲ್ಲಿ ಭಾರತ ಮೊದಲನೇ ಸ್ಥಾನ ಪಡಕೊಂಡ ಸುದ್ದಿ ಬಂದಿತ್ತು, ಈಗ ನಮ್ಮ ಬೆಂಗಳೂರಿಗೆ ಕುಬೇರ ನಗರ ಪಟ್ಟವೇ?! ಸರಿಯಾಗಿ ಸಮೀಕ್ಷೆ ಮಾಡಿದ್ದಾರೋ ಅಥವಾ ಇಲ್ಲಿನ ರಿಚ್ಮಂಡ್ ಟೌನು, ಡಾಲರ್ಸ್ ಕಾಲೊನಿ, ಮಹಾಲಕ್ಷ್ಮಿ ಲೇಔಟ್ ಅಂತ ಹೆಸರು ಕೇಳಿಬಿಟ್ಟು ಈ ತೀರ್ಮಾನಕ್ಕೆ ಬಂದಿದಾರೋ?’

‘ಹಾಗಲ್ಲಾ ಕಣೆ, ಅವೆಲ್ಲಾ ಅಂತರರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳು, ಜವಾಬ್ದಾರಿಯಿಂದ ಮಾಡಿರ್ತಾವೆ. ಬೆಂಗಳೂರಲ್ಲಿ ಎಂಟು– ಹತ್ತು  ಕೋಟಿಗೂ ಹೆಚ್ಚು ಹಣ ಇರೋರು ಲಕ್ಷಾಂತರ ಮಂದಿ ಇದ್ದಾರಂತೆ ಮಹರಾಯ್ತಿ’.

‘ಅಲ್ಲಾರಿ, ಅವರು ನಮ್ಮ ಸ್ಲಮ್ಮು, ಕೆಳ ಮಧ್ಯಮ ವರ್ಗದ ಪ್ರದೇಶಗಳ ಕಡೆ ಗಮನ ಹರಿಸಿದ್ದರೋ? ಬೆರಳೆಣಿಕೆಯಷ್ಟು ಶ್ರೀಮಂತರನ್ನ ನೋಡಿಬಿಟ್ಟು ಶ್ರೀಮಂತ ನಗರ ಅಂದ್ಬಿಟ್ಟರೆ’.

‘ಅವುಗಳ ಬಗ್ಗೆ ಅವರು ತಲೆಕೆಡಿಸಿಕೊಳ್ಳೋಲ್ಲ, ಅದನ್ನು ಸರ್ಕಾರಿ ಸಮೀಕ್ಷೆಗಳು ಹಾಗೋ ಹೀಗೋ ಮಾಡ್ಕೋಬಹುದು, ಅವರಿಗೇನಿದ್ದರೂ ಶ್ರೀಮಂತರ ಮೇಲೇ ಕಣ್ಣು. ಬಡವರೇನು? ಲೆಕ್ಕಕ್ಕೆ ಸಿಗಲಾರದಷ್ಟು ಇರ್ತಾರೆ’.

‘ಅಲ್ಲಾ, ಈ ಕುಬೇರರು ಈ ಸಿರಿ ನಗರದಿಂದ ಗಳಿಸಿರೋ ಸಂಪತ್ತಿನ ಸ್ವಲ್ಪ ಲಾಭಾಂಶಾನ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಅನ್ನೋ ಹಾಗೆ ಇಲ್ಲಿನ ಕೆರೆಗಳು, ರಸ್ತೆಗಳು, ಗ್ರಂಥಾಲಯ, ರಂಗಮಂದಿರಗಳ ಅಭಿವೃದ್ಧಿಗೆ ಬಳಸಿದರೆ ಈ ‘ಸಿರಿ-ಬೆಂಗಳೂರಿನ ಸಂಭ್ರಮ’ವನ್ನ ಹಿರಿಹಿರಿ ಹಿಗ್ಗಿನಿಂದ ಆಚರಿಸಬಹುದು’.

‘ಒಪ್ಪಿದೆ ನಿನ್ನ ಪಾಯಿಂಟು. ನಮ್ಮ ‘ಹೋಮ್’ ಮಿನಿಸ್ಟರ್ ಅಲ್ವೇ ತಾವು? ಸ್ವಲ್ಪ  ಎಫ್.ಎಂ ಆನ್ ಮಾಡ್ತಿರಾ?’

‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ...’ ಹಾಡು ಜೋರಾಗಿ ಕೇಳಿಸುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.