ADVERTISEMENT

ಚುರುಮುರಿ | ಅಂತರಂಗ ಸುದ್ದಿ

ಮಣ್ಣೆ ರಾಜು
Published 20 ಡಿಸೆಂಬರ್ 2022, 22:30 IST
Last Updated 20 ಡಿಸೆಂಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಎಲೆಕ್ಷನ್ ಖರ್ಚಿಗೆ ಪಕ್ಷ ಕೊಟ್ಟ 15 ಕೋಟಿ ರೂಪಾಯಿಯಲ್ಲಿ 5 ಕೋಟಿ ಖರ್ಚು ಮಾಡಿ, ಉಳಿದ ಹತ್ತನ್ನು ಜೇಬಿಗಿಳಿಸಿದ್ದು ಉಳಿಕೆಯೋ ಗಳಿಕೆಯೋ?’ ಸುಮಿ ಕೇಳಿದಳು.

‘ಆ ಪಕ್ಷದ ಆರ್ಥಿಕ ಸಾಮರ್ಥ್ಯದ ಹೆಗ್ಗಳಿಕೆ ಅಂದುಕೊಳ್ಳಬಹುದು’ ಅಂದ ಶಂಕ್ರಿ.

‘ಆದರೆ, ಪಕ್ಷದ ಆಂತರಿಕ ವಿಚಾರವನ್ನು ಬಹಿರಂಗಗೊಳಿಸಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗೋದಿಲ್ವೆ? ಸಂಸಾರದ ಗುಟ್ಟು ವ್ಯಾಧಿ ರಟ್ಟು, ಪಕ್ಷದ ಗುಟ್ಟು ಬೀದಿ ರಟ್ಟು ಕಣ್ರೀ...’

ADVERTISEMENT

‘ಹೌದು, ಗುಟ್ಟು ರಟ್ಟು ಮಾಡದಂತೆ ನಾಯಕರ ಬಾಯಿಕಟ್ಟಬೇಕು, ಇಲ್ಲವೆ ಪಕ್ಷದ ನಾಯಕರು ಬಾಯಿ ನಾಯಕರನ್ನು ಬಾಯ್ಕಾಟ್ ಮಾಡಿ ಪಕ್ಷದ ಮಾನ ಕಾಪಾಡಬೇಕು’.

‘ಈ ಪ್ರಕರಣದ ಸರಾಸರಿ ಸತ್ಯಾಂಶವೇನು?’

‘ತಮ್ಮ ಹುಳುಕು ಮುಚ್ಚಿಕೊಳ್ಳಲು ಬೇರೆ ನಾಯಕರ ಹುಳುಕನ್ನು ಕೆದಕಿ ಕೆರಳಿಸಬಾರದು...’

‘ಇದೆಲ್ಲಾ ಗಮನಿಸಿದರೆ, ಚುನಾವಣಾ ವೆಚ್ಚಕ್ಕೆ ವಿಧಿಸಿರುವ ಮಿತಿ ದೊಡ್ಡ ನಗೆಪಾಟಲು ಅನಿಸುತ್ತದೆ. ‘ಆ ಮೊತ್ತವು ಪ್ರಚಾರದ
ಓಡಾಟದ ಪೆಟ್ರೋಲ್, ಡೀಸೆಲ್ಲಿಗೂ ಸಾಕಾಗೋದಿಲ್ಲ, ಕರಪತ್ರ ಕೊಟ್ಟು, ಕೈ ಮುಗಿದು ಮತ ಕೇಳುವ ಕಾಲ ಇದಲ್ಲ’ ಅನ್ನೋದು ಅನುಭವಿ ನಾಯಕರ ಅಂತರಂಗದ ಅಭಿಪ್ರಾಯ ಆಗಿರಬಹುದೆ?’

‘ಇರಬಹುದು, ವಸ್ತುಸ್ಥಿತಿ ಹಾಗೂ ವೆಚ್ಚ ಏರಿಕೆಗೆ ಅನುಗುಣವಾಗಿ ಚುನಾವಣಾ ವೆಚ್ಚದ ಮಿತಿ ಹಿಗ್ಗಿಸುವ ಕಾಲ ಬಂದರೂ ಬರಬಹುದು’.

‘ಚುನಾವಣೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗುವ ಈ ಪರ್ವ ಕಾಲದಲ್ಲಿ ಟಿಕೆಟ್ ವಂಚಿತರು, ಸ್ಥಾನಮಾನ ವಂಚಿತರು ನಾಯಕರ ವಿರುದ್ಧ ಸಿಡಿದೇಳಬಹುದು. ಪಕ್ಷ ಬೇರ್ಪಡೆ, ಸೇರ್ಪಡೆಗಳು ನಡೆದು ಮತ್ತಷ್ಟು ರಾಜಕೀಯ ಗುಟ್ಟುಗಳು ಬಯಲಾಗಬಹುದು’.

‘ಹೋಗ್ಲಿಬಿಡು, ರಾಜಕೀಯ ಪಕ್ಷಗಳ ಅಂತರಂಗದ ವಿಚಾರ ನಮಗೇಕೆ? ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಸಿದ್ಧ ಮಾಡುವ ಸಡಗರ
ದಲ್ಲಿವೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯೇ ಅನ್ನೋದನ್ನು ಖಚಿತಪಡಿಸಿಕೊಂಡು ನಾವೂ ಚುನಾವಣೆಗೆ ಸಿದ್ಧರಾಗೋಣ...’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.