‘ಲೇಯ್, ನಮ್ ಸಿಎಂ ಸಾಹೇಬ್ರು ಸಂಪುಟಕ್ಕೆ ಸರ್ಜರಿ ಮಾಡ್ತಾವ್ರಂತೆ ಕಣ್ರಲಾ’ ಹರಟೆಕಟ್ಟೇಲಿ ಗುದ್ಲಿಂಗ ಮಾತು ತೆಗೆದ.
‘ವೂ ಕಣ್ಲಾ, ಮಿಡಿಯದ ಹಾರ್ಟು, ಡೆಡ್ಲಿ ಥ್ರೋಟು, ಉಳುಕಿರೊ ವೈಸ್ಟು ಎಲ್ಲಾ ಕಿತ್ತಾಕಿ ವೊಸ್ದಾಗಿ ಜೋಡುಸ್ತಾರಂತೆ’ ಎಂದ ಮಾಲಿಂಗ.
‘ಇದ್ಯಾವುದೊ ಮೆಡಿಸಿನ್ ಭಾಷೇಲಿ ಹೇಳ್ತಿದೀಯಲ್ಲೋ...’
‘ಕಮಲ್ದೋರು ಮೆಡಿಸಿನ್ನಲ್ಲೂ ಕಾಸು ಹೊಡ್ದು ‘ಸಿನ್’ ಮಾಡವ್ರೆ ಅಂತ ವರಾತ ತೆಗುದ್ಮೇಲೆ, ವೆಂಟಿಲೇಟರ್ ಪ್ಲೆಂಟಿ ಈಟರ್ ಆಗೈತೆ ಅಂತ ವರದಿ ಬಂದ್ ಮೇಲೆ ಎಲ್ಲಾ ಮೆಡಿಸಿನ್ ಭಾಷೆನೇ ಆಗೋಗದೆ’.
‘ಅದೆಲ್ಲಾ ಕೋಟಿ ಕೋಟಿ ವಿಷಯ, ನಾಟಿ ಔಷ್ಧಿಗೆ ಓಗೋದಲ್ಲ. ಮಿಡಿಯದ ಹಾರ್ಟು ಅದೂ ಇದೂ ಅಂದ್ಯಲ್ಲ, ಅದ್ನ ಒಸಿ ಬಿಡ್ಸಿ ಯೋಳು’ ಕೇಳಿದ ಕಲ್ಲೇಶಿ.
‘ಅದ್ರಲ್ಲೇನೈತೆ ಬಿಡ್ಸಿ ಯೋಳಕ್ಕೆ? ಮಿಡಿಯದ ಹಾರ್ಟು ಅಂದ್ರೆ ಬಡವರಿಗೆ ಸ್ಪಂದಿಸದ
ಹೃದಯ ಇರೋರು ಅಂತ. ಡೆಡ್ ಥ್ರೋಟು ಅಂದ್ರೆ ಸದನದಲ್ಲಿ ಕ್ಷೇತ್ರದ ಬಗ್ಗೆ ಬಾಯ್ ಬಿಡ್ದೋರು, ಇನ್ನು ಉಳುಕಿರೋ ವೈಸ್ಟು ಅಂದ್ರೆ ಜನರನ್ನ ರೀಚ್ ಆಗ್ದೇ ರೆಸಾರ್ಟಲ್ಲಿ ಕೂತಿರೋರು ಅಂತ’.
‘ಅಯ್ಯೋ ಅದು ಅಂಗಲ್ಲಲೇ... ಮಿಡಿಯದ ಹಾರ್ಟು ಅಂದ್ರೆ ಕಾತೆ ಜವಾಬ್ದಾರಿನೂ ವಹಿಸ್ಕಳ್ದೆ, ಮುಡಾ ಕ್ಯಾತೆಲಿ ಸಿಎಂ ಪರನೂ ವಹಿಸ್ಕಳ್ದೆ ಇರೋರು ಈ ಕೆಟಗರಿಗೆ ಬತ್ತಾರೆ. ಇನ್ನು ಡೆಡ್ಲಿ ಥ್ರೋಟು ಅಂದ್ರೆ ಸಿಎಂ, ಪಕ್ಷದ ವಿರುದ್ಧವೇ ಮಾತಾಡೋರು ಅಂತ. ಉಳುಕಿದ ವೈಸ್ಟ್ ಅಂದ್ರೆ ಸಿಎಂ ಕುರ್ಚಿಗೆ ಟವಲ್ ಹಾಕ್ಕಂಡು ಕಾಯ್ಕೊಂಡಿರೋರು ಅಂತ’.
‘ಅಂಗಾದ್ರೆ ಯಾರ‍್ಗೂ ಗ್ಯಾರೆಂಟಿ ಇಲ್ಲ ಅನ್ನು’.
‘ಗ್ಯಾರೆಂಟಿ ಬಗ್ಗೆ ಕಾಮೆಂಟ್ ಮಾಡ್ದೇ, ಅನುದಾನ ಕೇಳ್ದೇ ಇರೋರಿಗೆ ಚಾನ್ಸ್ ಇರ್ಬಹುದು’.
ಎಲ್ಲರೂ ಹೌದೌದು... ಗ್ಯಾರೆಂಟಿಗೆ ಜೈ! ಎಂದು ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.