ADVERTISEMENT

ಚುರುಮುರಿ | ಆತ್ಮವೂ ಸಾಕ್ಷಿಯೂ..

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 23:30 IST
Last Updated 29 ಫೆಬ್ರುವರಿ 2024, 23:30 IST
   

‘ಏನ್ರಲೆ ಹೊಸ ಸುದ್ದಿ?’ ಹರಟೆಕಟ್ಟೇಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.

‘ಹೊಸ ಸುದ್ದಿನಾ? ಕರೆಂಟ್ ದರ ಇಳಿಕೆ,
ಅಕ್ಕಿ ದರ ಏರಿಕೆ’ ಎಂದ ತೆಪರೇಸಿ.

‘ಕರೆಂಟ್ ನಮಿಗೆಲ್ಲ ಫ್ರೀ ಸಿಗ್ತಾ ಐತಿ, ಅದು ಬಿಡು, ಈ ಅಕ್ಕಿಗೇನಾತು ಅಂತ?’

ADVERTISEMENT

‘ಅಗಲಗಲ ಈರುಳ್ಳಿ ಒಂದೇ ಏನು ಏರೋದು, ನಾನೂ ಒಂದ್ಸಲ ಏರ್ತೀನಿ ಅಂತ ಅಕ್ಕಿನೂ ಏರಿರ್ಬೇಕು’ ಗುಡ್ಡೆ ನಕ್ಕ.

‘ಅದು ಬಿಡ್ರಲೆ, ಈಗ ಈ ಆತ್ಮಸಾಕ್ಷಿ ಅಂದ್ರೆ ಏನು?’ ಕೊಟ್ರ ವಿಷಯ ಬದಲಿಸಿದ.

‘ಅದಾ? ಆತ್ಮ ಒಪ್ಪೋ ತರ ನಡ್ಕಳೋದು’.

‘ಮತ್ತೆ ಆತ್ಮ ಅಂದ್ರೇನು? ಎಲ್ಲಿರ್ತತಿ ಅದು? ನಾವು ಸತ್ತಾಗ ಮೇಲಿಂದ ನೋಡ್ತಿರ್ತತಿ ಅಂತಾರಲ್ಲ, ಅದಾ?’

‘ಏನೋಪ್ಪ, ಮೋಸ್ಟ್‌ಲೀ ಅದೇ ಇರ್ಬೇಕು’ ಗುಡ್ಡೆ ಗಡ್ಡ ಕೆರ್ಕಂಡ.

‘ಅದ್ಕೆ ಸಾಕ್ಷಿ ಏನು? ಆತ್ಮನ ಯಾರು ನೋಡಿದಾರೆ?’

‘ಲೇಯ್, ಆತ್ಮಾನ ಯಾರೂ ನೋಡೋಕಾಗಲ್ಲ, ಅದು ಅವರವರ ದೇಹದಲ್ಲಿರುತ್ತೆ, ಸತ್ತ ಮೇಲೆ ಮೇಲೋಗುತ್ತೆ’ ದುಬ್ಬೀರ ರೇಗಿದ.

‘ಹಂಗಾದ್ರೆ ಆತ್ಮವು ದೇಹದ ಯಾವ
ಭಾಗದಲ್ಲಿರುತ್ತೆ?’ ಕೊಟ್ರ ಬಿಡಲಿಲ್ಲ.

‘ಕಿಡ್ನೀಲಿರುತ್ತೆ ಅನ್ಕೋ, ಏನೀಗ?’
ತೆಪರೇಸಿ ನಕ್ಕ.

‘ಕೆಲವರತ್ರ ಆತ್ಮಾನೇ ಇರಲ್ಲಪ್ಪ,
ಸಾಕ್ಷಿ ಎಲ್ಲಿಂದ ಕೊಡೋದು?’

‘ಸಾಕ್ಷಿ ಯಾರ್ಗೂ ಕೊಡ್ಬೇಕಾಗಿಲ್ಲ,
ಅವರವರೇ ಕೊಟ್ಕಂಡ್ರೆ ಸಾಕು’.

‘ಆತ್ಮಕ್ಕೆ ಮೋಸ ಮಾಡೋಕಾಗಲ್ವ?’

‘ಮಾಡಬೋದು, ಅದು ಆತ್ಮವಂಚನೆ’.

‘ಮೊನ್ನೆ ಒಬ್ರು ಅಡ್ಡಮತದಾನ ಮಾಡಿದ್ರಲ್ಲ, ಅದು ಆತ್ಮವಂಚನೆ ಅಲ್ವಾ?’

‘ಅವರು ಹಿಂದೆ ಹಳೇ ಪಕ್ಷದಲ್ಲಿದ್ರಲ್ಲ, ಮೋಸ್ಟ್‌ಲೀ ಅವರ ಆತ್ಮ ಅಲ್ಲೇ ಇತ್ತು ಅನ್ಸುತ್ತೆ, ಅದ್ಕೆ ಅದು ಅಡ್ಡ ಮತದಾನ ಮಾಡ್ಸಿದೆ’.

‘ಆಮೇಲೆ, ಈ ಪ್ರೇತಾತ್ಮ ಅಂತಾರಲ್ಲ,
ಪ್ರೇತಕ್ಕೂ ಆತ್ಮ ಇರುತ್ತಾ?’

‘ಲೇಯ್ ಕೊಕ್ಕೆ ಕೊಟ್ರ, ಎದ್ದು ನಡಿಯಲೆ ಆಚೆಗೆ’ ರೇಗಿದಳು ಮಂಜಮ್ಮ.

ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.