‘ಲೇ ದುಬ್ಬೀರ, ವಿಷ್ಯ ಗೊತ್ತಾತ? ನಮ್ ಚಾದಂಗಡಿ ಮಂಜಮ್ಮಂದು ಬಿಪಿಎಲ್ ಕಾರ್ಡ್ ರದ್ದಾತಂತೆ...’ ಎಂದ ತೆಪರೇಸಿ.
‘ನಂದೂ ರದ್ದಾಗೇತಿ’ ಎಂದ ಗುಡ್ಡೆ.
‘ಅಲ್ಲೋ ನಿನ್ನತ್ರ ಬೈಕು, ಮೊಬೈಲು, ಮನ್ಯಾಗೆ ವಾಶಿಂಗ್ ಮೆಷೀನ್, ಟೀವಿ ಎಲ್ಲ
ಐತಿ, ಮಂಜಮ್ಮನತ್ರ ಏನೈತಿ?’ ತೆಪರೇಸಿ
ಪ್ರಶ್ನಿಸಿದ.
‘ಅಂದ್ರೇ ಮೊಬೈಲು, ಬೈಕು ಇದ್ದೋರು ಶ್ರೀಮಂತರಾ? ಇವತ್ತು ಮೊಬೈಲ್ ಇಲ್ದೇ ಇರೋರು ಯಾರದಾರೆ ಹೇಳಲೆ, ಎಮ್ಮಿ ಕಾಯೋರತ್ರನೂ ಮೊಬೈಲ್ ಇರ್ತತಿ’ ಗುಡ್ಡೆ ವಾದಿಸಿದ.
‘ಅದು ಹಂಗಲ್ಲೋ, ಸರ್ಕಾರ ಅದೇನೋ ಮಾನದಂಡ ಮಾಡೇತಲ್ಲ’.
‘ಮಾನ ಎಲ್ಲೈತಿ? ಬರೀ ದಂಡ ಅಷ್ಟೆ. ಮಂಜಮ್ಮನತ್ರ ಏನೈತಿ ಅಂದ್ರೆಲ್ಲ, ಅವಳತ್ರ ಪೋರ್ ವೀಲರ್ ಇಲ್ವಾ?’
‘ಪೋರ್ ವೀಲರ‍್ರಾ? ಮಂಜಮ್ಮನತ್ರಾನಾ?’ ಕೊಟ್ರೇಶಿ ತಲೆ ಕೆರೆದುಕೊಂಡ.
‘ಮತ್ತೆ ಇಲ್ವಾ? ಅವಳ ಚಾದಂಗಡಿ ತಳ್ಳೋ ಗಾಡಿಗೆ ನಾಲ್ಕು ಚಕ್ರ ಇಲ್ವಾ?’
ಗುಡ್ಡೆ ಕೀಟಲೆಗೆ ತೆಪರೇಸಿಗೆ ಸಿಟ್ಟು ಬಂತು ‘ನಿನ್ತೆಲಿ, ಇದ್ರಾಗೂ ನಗಿಚ್ಯಾಟಿಕಿ ಮಾಡ್ತೀಯಲ್ಲಲೆ, ಮಂಜಮ್ಮ ಇದ್ದಿದ್ರೆ ನಿನ್ನ ಉಗಿದು ಉಪ್ಪಾಕಿರೋಳು’ ಎಂದ.
‘ನೋಡ್ರಲೆ, ಈ ದೇಶದಾಗೆ ಎರಡೇ ಇರೋದು. ಒಂದು ಐಪಿಎಲ್ ಭಾರತ, ಇನ್ನೊಂದು ಬಿಪಿಎಲ್ ಭಾರತ. ಈ ಗುಡ್ಡೆ ಯಾವತ್ತಾದ್ರೂ ಸೊಸೈಟಿ ರೇಷನ್ನಿಗೆ ಕ್ಯೂ ನಿಂತಿದಾನಾ? ಅವನ ಗಾಡಿಗೂ ಬಾಡಿಗೂ ಎಣ್ಣೆ ಹಾಕಾಕೇ ತಿಂಗಳಿಗೆ ಹತ್ತು ಸಾವಿರ ಬೇಕು. ಜೊತೆಗೆ ಐಪಿಎಲ್ ಬೆಟ್ಟಿಂಗ್ ಬೇರೆ ಆಡ್ತಾನೆ, ಇವ್ನು ಬಡವಾನಾ?’ ಕೊಟ್ರೇಶಿ ಕೊಕ್ಕೆ ಹಾಕಿದ.
‘ಹೌದು ಬಡವಾನೇ... ಅವ್ನು ಬಿಪಿಎಲ್ಲೇ...’ ಎಂದ ದುಬ್ಬೀರ.
‘ಹೆಂಗೆ ಅಂದ್ರೆ? ಐಪಿಎಲ್ ಬೆಟ್ಟಿಂಗ್ ಆಡಿ ಆಡೇ ಅವ್ನು ಬಿಪಿಎಲ್ ಆಗಿರೋದು!’ ದುಬ್ಬೀರನ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು. ಗುಡ್ಡೆ ಪಿಟಿಕ್ಕನ್ನಲಿಲ್ಲ.
‘ಹೆಂಗೆ?’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.