‘ಒಬ್ಬರಿಗೊಬ್ಬರು ಜಗಳ ಆಡಬೇಡಿ, ಫ್ರೆಂಡ್ಸಾಗಿರಿ ಅಂತ ಮಕ್ಕಳಿಗೆ ಬುದ್ಧಿ ಹೇಳಬಹುದು, ಜಗಳವಾಡಬೇಡಿ ಅಂತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹೇಳಿದರೆ ಕೇಳ್ತಾರಾ?’ ಸುಮಿಗೆ ಬೇಸರ.
‘ಕೇಳಲ್ಲ. ಆದರೆ ಕಚೇರಿ, ಕಾನೂನು ವ್ಯಾಪ್ತಿಯಲ್ಲಿ ಜಗಳವಾಡಿ, ಬೀದಿಗೆ ಬರಬೇಡಿ ಎಂದು ಹೇಳಬಹುದಷ್ಟೇ’ ಅಂದ ಶಂಕ್ರಿ.
‘ಸುದ್ದಿ ಮಾಧ್ಯಮಗಳಲ್ಲಿ ಅವರೊಂದು ಫ್ರೇಮಿನಲ್ಲಿ, ಇವರೊಂದು ಫ್ರೇಮಿನಲ್ಲಿ ಕಾಣಿಸಿಕೊಂಡು ಒಬ್ಬರ ಮೇಲೊಬ್ಬರು ಆರೋಪ ಮಾಡ್ತಾರೆ, ಮುಖಾಮುಖಿಯಾಗಿ ಬೈದಾಡಲಿಲ್ಲ, ಮುಖ-ಮೂತಿ ತಿವಿದಾಡಲಿಲ್ಲ, ಇದೆಂಥಾ ಜಗಳ?!’
‘ಸುದ್ದಿಮಾಧ್ಯಮದಲ್ಲಿ ಸದ್ದು ಮಾಡುವ, ಸಾಮಾಜಿಕ ಜಾಲತಾಣದಲ್ಲಿ ಜನ್ಮ ಜಾಲಾಡಿಸುವ ಜಗಳ’.
‘ಆಡಳಿತಾಧಿಕಾರಿಗಳು ಬೀದಿ ಜಗಳಕ್ಕಿಳಿದರೆ ಆಡಳಿತ ವ್ಯವಸ್ಥೆ ಅಧ್ವಾನವಾಗಲ್ವಾ?’
‘ಆಡಳಿತ ನಡೆಸುವ ಅಧಿನಾಯಕರೇ ಸ್ಥಾನಮಾನ ಮರೆತು ಜಗಳವಾಡ್ತಾರೆ, ನಾಯಕರ ಜಗಳ ಅಧಿಕಾರಿಗಳಿಗೆ ಪ್ರೇರಣೆ ಆಗಿರಬಹುದು’.
‘ಜಗಳ ರಾಜಕಾರಣಿಗಳ ಆಜನ್ಮಸಿದ್ಧ ಹಕ್ಕು, ಈ ಜನ್ಮದ ಲಕ್ಕು. ರಾಜಕಾರಣಿಗಳದ್ದು ಜಾಣ ಜಗಳ, ಜನರಂಜನೆ ಜಗಳ. ಅವರು ಬಹಿರಂಗದಲ್ಲಿ ಬೈದಾಡಿದರೂ ಅಂತರಂಗದಲ್ಲಿ ಆತ್ಮೀಯರಾಗಿರ್ತಾರಂತೆ. ಅವರ ನಾಟಕೀಯ ಬೈಗುಳ ನಾಟುವುದಿಲ್ಲವಂತೆ’.
‘ಎಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳಿಗೆ ಜಗಳ ಅನಿವಾರ್ಯ, ಅವರ ಜಗಳೋತ್ಸಾಹಕ್ಕೆ ಅಡ್ಡಿ ಮಾಡಬಾರದು. ಆಡಳಿತ-ವಿಪಕ್ಷದವರು
ಪರಸ್ಪರ ಯಥೇಚ್ಛವಾಗಿ ಜಗಳವಾಡಿ, ಬೈದಾಡಿಕೊಂಡು ತಮ್ಮ ಸುದ್ದಿಸಾಮರ್ಥ್ಯ ಹೆಚ್ಚಿಸಿಕೊಂಡು, ಪಕ್ಷದ ವರಿಷ್ಠರ ಗಮನ ಸೆಳೆದು ಟಿಕೆಟ್ ಪಡೆಯಲು ಅವಕಾಶ ನೀಡಬೇಕು’.
‘ಚುನಾವಣೆಗೆ ಟಿಕೆಟ್ ಪಡೆಯಲು ಜನಸೇವೆ, ಅಭಿವೃದ್ಧಿ ಚಿಂತನೆಯ ಅಭ್ಯರ್ಥಿ ಸೂಕ್ತ ಅಲ್ವೇನ್ರೀ?’
‘ಅದೆಲ್ಲಾ ಪುಸ್ತಕದ ಬದನೆಕಾಯಿ. ಪ್ರತಿಪಕ್ಷದ ಮಾನಹರಣ ಮಾಡಿ, ಮಟ್ಟ ಹಾಕಿ, ತಮ್ಮ ಪಕ್ಷವನ್ನು ಪಟ್ಟಕ್ಕೇರಿಸುವ ಸಮರ್ಥ ಬೈಗುಳ ನಾಯಕರು ಟಿಕೆಟ್‍ಗೆ ಅರ್ಹರಾಗುತ್ತಾರೆ...’ ಎಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.