ADVERTISEMENT

ಚುರುಮುರಿ: ಕೋಟಿ ಕಿಮ್ಮತ್ತಿನ ಕೋಣ

ಸುಮಂಗಲಾ
Published 17 ನವೆಂಬರ್ 2024, 19:41 IST
Last Updated 17 ನವೆಂಬರ್ 2024, 19:41 IST
Churumuri===18112024
Churumuri===18112024   

ಸುಮಂಗಲಾ

ಬೆಕ್ಕಣ್ಣ ಮನೆ ತುಂಬ ಏನೇನೋ ಸಾಮಾನು ಹರವಿಟ್ಟಿತ್ತು. ‘ಕೋಣನಂಗೆ ಬೆಳದೀ, ಬುದ್ಧಿ ಇಲ್ಲಾ? ಎಲ್ಲ ಜೋಡಿಸಿಡು’ ಎಂದು ಬೈದೆ.

‘ಮಾತು ಮಾತಿಗೆ ನನಗೆ ಕೋಣ ಅನ್ನಬ್ಯಾಡ. ಕೋಣಂಗೂ ಕೋಟಿ ಕಿಮ್ಮತ್ತಿರತೈತಿ ತಿಳಕೋ’ ಎಂದು ಮೂತಿಗೆ ತಿವಿಯಿತು.

ADVERTISEMENT

‘ಹರಿಯಾಣದಲ್ಲಿ ಕೋಟಿ ಕಿಮ್ಮತ್ತಿನ ಕೋಣ ಐತಂತೆ. ಅದೂ ಒಂದಲ್ಲ, ಎರಡಲ್ಲ, ಬರೋಬ್ಬರಿ 23 ಕೋಟಿ ರೂಪಾಯಿ ಕಿಮ್ಮತ್ತಂತೆ’ ಬೆಕ್ಕಣ್ಣ ನಕ್ಕಿತು.

‘ಎಲಾ ಇವ್ನ... ಅದೇನು ಬಂಗಾರದ ಕೋಣ ಏನಲೇ?’ ನಾನು ಅಚ್ಚರಿಗೊಂಡೆ.

‘ಬಂಗಾರದ್ದಲ್ಲ, ಅದಕ್ಕೂ ಮಿಗಿಲಾದ ಕೋಣ’ ಎಂದು, ಕಪ್ಪಗೆ ಮಿರಮಿರನೆ ಮಿಂಚುತ್ತಿದ್ದ ‘ಅನ್ಮೋಲ್‌’ ಹೆಸರಿನ ಕೋಣದ ಫೋಟೊ ತೋರಿಸಿತು.

‘ದಿನಾ ಕಾಲು ಕೇಜಿ ಬಾದಾಮಿ, ಬೇಕಾದಷ್ಟು ಬಾಳೆಹಣ್ಣು, ದಾಳಿಂಬೆ, ಮೊಟ್ಟೆ ಅಷ್ಟೇ ಅಲ್ಲದೆ ಲೀಟರುಗಟ್ಟಲೆ ಹಾಲು ಕೊಡ್ತಾರಂತೆ. ಮತ್ತೆ ದಿನಕ್ಕೆರಡು ಸಲ ಸ್ನಾನನೂ ಮಾಡಿಸ್ತಾರಂತೆ’ ಬೆಕ್ಕಣ್ಣ ಕೋಣನ ವೈಭೋಗವನ್ನು ಕಣ್ಣಾರೆ ಕಂಡಂತೆ ವರ್ಣಿಸಿತು.

‘ಕೋಣ ಭಾಳ ಪುಣ್ಯ ಮಾಡೈತಿ ಬಿಡು. ನಮ್ಮ ದೇಶದಾಗೆ ಎಷ್ಟೋ ಮಕ್ಕಳಿಗೆ ಬಾದಾಮಿಗೀದಾಮಿ ದೂರವುಳೀತು, ಒಂದು ಲೋಟ ಹಾಲೂ ಸಿಗಂಗಿಲ್ಲ’.

‘ಇಂಥಾ ಕೋಣ ಇರೋ ನಾನೇ ಪುಣ್ಯವಂತ ಅಂತ ಅದರ ಮಾಲೀಕ ಹೇಳ್ಯಾನೆ. ವಾರಕ್ಕೆರಡು ಸಲ ಅದು ವೀರ್ಯದಾನ ಮಾಡತೈತಂತ. ತಿಂಗಳಿಗೆ ನಾಕೈದು ಲಕ್ಷ ದುಡಿತೈತೆ’.

‘ಪಾಪ... ಬೇರೆ ಕೋಣಗಳ ಹಂಗೆ ಸಹಜವಾದ ಜೀವನಾನೇ ಇಲ್ಲವಲ್ಲ ಅದಕ್ಕೆ! ಹೊರಗೆ ಕಾಲಾಡಿಸಿಕೊಂಡು ಬೇಕಾದಂತೆ ಹುಲ್ಲು ತಿನ್ನೋ ಹಂಗಿಲ್ಲ, ಎಮ್ಮೆಗಳ ಬೆನ್ಹತ್ತೋ ಹಂಗಿಲ್ಲ, ಕೆಸರುಗುಂಡಿಯಲ್ಲಿ ಬಿದ್ದು ಹೊರಳಾಡಂಗಿಲ್ಲ’ ನಾನು ಮರುಕದಿಂದ ಹೇಳಿದೆ.

‘ಮನುಷ್ಯರು ನಿಮ್ಮ ಖಯಾಲಿಗಳಿಗಾಗಿ ಸಾಕೋ ಯಾವ ಪ್ರಾಣಿಗಳಿಗೆ ಸಹಜ ಜೀವನ ಅನ್ನೂದು ಇರತೈತಿ? ಈ ಭೂಮಂಡಲದೊಳಗೆ ನೀವೂ ಒಂದು ಪ್ರಾಣಿ ಅನ್ನೋದನ್ನೇ ಮರಿತೀರಿ’ ಬೆಕ್ಕಣ್ಣ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.