‘ರೀ, ನೋಡಿದ್ರಾ ಈ ಸುದ್ದೀನ? ನೋಡೋಕೆ ಎರಡು ಕಣ್ಣು ಸಾಲದು, ಕೋಟಿ, ಕೋಟಿವಂತ ಕುಬೇರರು’. ಸಲೀಸಾಗಿ ಟಿಕೆಟ್ಟೂ ಸಿಕ್ಕು, ಸುಲಭವಾಗಿ ಬಿ ಫಾರ್ಮೂ ಕೈಗೆ ಬಂದ ಅಭ್ಯರ್ಥಿ ತರಹ ಸಂಭ್ರಮಿಸ್ತಾ ಹೇಳಿದಳು ಮಡದಿ.
‘ಏನು? ಇವತ್ತು ನೀನೇ ಮೊದಲು ಪೇಪರ್ ಹಿಡ್ಕೊಂಡುಬಿಟ್ಟಿದ್ದೀಯಾ? ಗುಡ್, ನಿನಗೂ ಸುದ್ದಿ ಮೋಹ ಅಂಟಿಕೊಳ್ತಾ ಇದೆ ಅಂತಾಯ್ತು.
ಹೌದು ಕಣೆ, ಅವರು ಕೋಟಿ, ಕೋಟಿವಂತ ಕುಬೇರರು, ನಾವು ಆಳಿಸಿಕೊಳ್ಳೋರು... ಕುಚೇಲರು’.
‘ಅಲ್ಲಾರಿ, ಒಬ್ಬೊಬ್ಬರ ಹತ್ರ 1,000 ಕೋಟಿ, 900 ಕೋಟಿ, 800 ಕೋಟಿ, ಮತ್ತೆ ಟನ್‌ಗಟ್ಟಲೆ ಚಿನ್ನ, ಬೆಳ್ಳಿ, ಪತ್ನಿ ಹೆಸರಲ್ಲಿ? ಅಬ್ಬಬ್ಬಾ!’
‘ಅವರ ಮನೆ ನಾಯಿಗಳ ಬೆಲೆ ಹಾಕಿಲ್ಲ. ಅದನ್ನ ಕೇಳಿದ್ರೆ ಬೆಚ್ಚಿಬೀಳ್ತಿದ್ದೆ ನೀನು. ಘಂಟಾಘೋಷವಾಗಿ ಘೋಷಿಸಿದ್ದೇ ಇಷ್ಟು ಅಂದ್ರೆ, ಇನ್ನು ಬೇನಾಮಿ ಎಷ್ಟಿರಬಹುದು?’
‘ಎಲ್ಲ ಲೆಕ್ಕ ಹಾಕಿದರೆ ಅವರವರ ಕ್ಷೇತ್ರದ ಮತದಾರರೆಲ್ಲ ಹಾಯಾಗಿ ಜೀವನ ಮಾಡುವಷ್ಟು ಸಂಪತ್ತು ಒಬ್ಬೊಬ್ಬರ ಹತ್ರಾನೇ ಕೊಳೀತಾ ಇದೆಯಲ್ರೀ?’
‘ಆ ಲೆಕ್ಕ, ಈ ಲೆಕ್ಕ ಅಂತ ಲೆಕ್ಕಕ್ಕೆ ಸಿಗದ ಅಘೋಷಿತ ಸಂಪತ್ತೂ ಸೇರಿಬಿಟ್ರೆ ಅಗಣಿತ ಧನ-ಗಣಿಗಳವರು’.
‘ಅದಕ್ಕೇ... ಈಗ ಗೊತ್ತಾಯ್ತು, ಟಿಕೆಟ್ ಮಿಸ್ ಆದವರು ಯಾಕೆ ಕಣ್ಣೀರು ಸುರಿಸ್ತಾರೆ, ನೀರಿನಿಂದ ಆಚೆ ಬಿದ್ದ ಮೀನಿನ ಹಾಗೆ ಆಡ್ತಾರೆ ಅಂತ’.
‘ಗೊತ್ತಾಗಬೇಕು ಅವ್ರಿಗೆ, ಒಂದ್ಹೊತ್ತಿನ ಊಟಕ್ಕೆ ಬಡವರು ಎಷ್ಟು ಕಣ್ಣೀರು ಸುರಿಸ್ತಾರೆ ಅಂತ’.
‘ತಗ್ಗು ಇದ್ದ ಕಡೆನೇ ನೀರು ಅನ್ನೋ ಹಾಗೆ ದುಡ್ಡಿರೋರ ಹತ್ರಾನೇ ದುಡ್ಡು ಸೇರಿ, ಐದೈದು, ಆರಾರು ತಲೆಮಾರುಗಳಿಗಾಗೋವಷ್ಟು ಹಣ’.
‘ಸಮಾಜವಾದ, ಸಮತಾವಾದ ಅಂತ ಇದ್ದವು, ಈಗ ಏನಿದ್ರೂ ಬಂಡವಾಳದಾರ
ರದೇ ಬಾಯಿ, ಬಡಾಯಿ, ಆಟ, ಬೊಂಬಾಟ’.
‘ಅಂತೂ ಚುನಾವಣಾ ಕಣದಲ್ಲಿ ಹಣ... ಹಣ...’
‘ಅದಕ್ಕೇ ಮೇಡಂ...‘ಹಣಾ’ಹಣಿ ಹೋರಾಟ ಅಂತ ಬಾಯಿಬಡ್ಕೊಳ್ಳೋದು’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.