ADVERTISEMENT

ಚುರುಮುರಿ | ಬರಿ ಓಳು, ಬರಿ ಓಳು

ಲಿಂಗರಾಜು ಡಿ.ಎಸ್
Published 24 ಅಕ್ಟೋಬರ್ 2022, 21:00 IST
Last Updated 24 ಅಕ್ಟೋಬರ್ 2022, 21:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿ ಗಳು ದೀವಳಿಗೆ ಹಬ್ಬಕ್ಕೆ ಮನೆ ಮನೆಗೋಗಿ ಉಡುಗೊರೆ ಕೊಡ್ತಾವ್ರಂತೆ ಸಾ’ ಅಂತ ಸುದ್ದಿ ಹೇಳಿದೆ.

‘ಈಗ ಉಡುಗೊರೆ ಇಟ್ಟಾಡುಸ್ತರೆ. ಗೆದ್ದ ಮೇಲೆ ಏನನ್ನಾ ಕೇಳಕ್ಕೋದ್ರೆ ಕೆನ್ನೆಗೆ ವಡಿತರೆ’ ಅಂತು ಯಂಟಪ್ಪಣ್ಣ.

‘ಸರ್ಕಾರಿ ಸ್ಕೂಲಲ್ಲಿ ನೂರು ರೂಪಾಯಿ ಉಡುಗೊರೆ ಕೊಡಬೇಕು ಅಂತ ಆಡ್ರು ಹೊಂಡುಸಿದ್ದು ಸರ್ಕಾರಕ್ಕೆ ಗೊತ್ತೇ ಇರಲಿಲ್ಲ ಅಂತ ನಾಗಣ್ಣ ಓಳು ಬುಟ್ಟವ್ರೆ ಪಾಪ’ ಚಂದ್ರು ಹುಸಿ ಪಟಾಕಿ ಹಾರಿಸಿದ.

ADVERTISEMENT

‘ಎಷ್ಟು ದೊಡ್ಡೊರಾದ್ರೂ ರಾಜಕಾಲುವೆ ಒತ್ತುವರಿ ತೆರವು ಮಾಡದೇಯ ಅಂತ್ಲೂ ನಾಯಕಮಣಿಗಳು ಓಳು ಬುಟ್ಟವ್ರೆ’ ಅಂತಂದೆ.

‘ದಿನಕ್ಕೊಬ್ರು ಸಾಯ್ತಾವ್ರೆ ರೋಡು ಗುಂಡಿ ಮುಚ್ರೀ ಅಂದ್ರೆ, ವರದಿ ತರಿಸಿ ಕ್ರಮ ತಗತೀವಿ ಅಂತ ಓಳು ಬುಡ್ತರೆ. ಕೋರ್ಟೂ ತಾರಾಮಾರ ಉಗೀತಪ್ಪ. ಒರೆಸಿಗ್ಯಂಡು ದಿಮ್ಮಗೆ ಕುಂತವ್ರೆ’ ಅಂತು ಯಂಟಪ್ಪಣ್ಣ.

‘ಇದೇನು ಕಂಡ್ರಿ ಸಾ, ರಾಜಕಾಲುವೆ ಹೂಳೆತ್ತಕ್ಕೆ ಅಂತ್ಲೇ ಪಾಲಿಕೆ ಐನೂರು ಕೋಟಿ ಖರ್ಚು ಮಾಡ್ಯದಂತೆ!’ ಅಂತಂದ ಚಂದ್ರು.

‘ರಸ್ತೇಲಿ ಹೂಳೆತ್ತಿದ್ಕೆ ಗುಂಡಿ ಆಗ್ಯದೆ ಕಪ್ಪಾ. ಮಳೆ ನಿಂತ ಮ್ಯಾಲೆ ಸೈತಾನ್ ಮಿಶೀನ್ ತಂದು ಎಲ್ಲ ಗುಂಡಿ ಮುಚ್ತೀವಿ ಅಂತ ಓಳು ಬುಡ್ತಲೇ ಬಂದವ್ರಲ್ಲ’ ಯಂಟಪ್ಪಣ್ಣ ಬಾಯ ಮ್ಯಾಲೆ ಬೆಳ್ಳು ಮಡಗಿತು.

‘ಹ್ಞೂಂಕನೇಳ್ಲಾ, ಹಿಂದೆ ಒಬ್ಬರು ಪಾಲಿಕೇಲಿ ಇನ್ನೂರು ಕೋಟಿ ರೂಪಾಯಿ ಹೂಳೆತ್ತಿ ಹೊಂಟೋದ್ರು. ಮಣ್ಣು ಎಲ್ಲೋತೋ ಗೊತ್ತಿಲ್ಲ! ಹೂಳೆತ್ತೋ ಕೆಲಸ ಅಂದ್ರೆ ‘ನಾನು ಮೊದಲು’ ಅಂತ ಕ್ಯೂ ನಿಂತುಗತ್ತರಂತೆ ಪಾಲಿಕೆ ಜನ’ ತುರೇಮಣೆ ಬಾಣ ಬುಟ್ಟರು.

‘ಇವುರ ತಲೆ ಒಳಗೇ ಹೂಳು ತುಂಬ್ಯದೆ’ ಅಂತು ಯಂಟಪ್ಪಣ್ಣ.

‘ಈಗ ಹೂಳೆತ್ತೋ ಸರದಿ
ಮುಂದುವರೆಸಿರೋ ಚೋರಾಗ್ರಣಿಗಳಿಗೆ ಏನಂತೀರಾ ಸಾ?’ ಕೇಳಿದೆ.

‘ಹೂಳ್ಪಡೆಯಪ್ಪುದು ಕಾಣಾ ಮಹಾ ಮೌಡ್ಯರಂಗದೊಳ್!’

ತುರೇಮಣೆ ಮತಾಪು ಹಾರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.