ADVERTISEMENT

ಚುರುಮುರಿ: ತೂಕ ಬಾಧೆ

ಲಿಂಗರಾಜು ಡಿ.ಎಸ್
Published 15 ಜುಲೈ 2024, 23:01 IST
Last Updated 15 ಜುಲೈ 2024, 23:01 IST
   

‘ಅಣೈ, ದಿಂಡು ಕುಳಗಳು ಗುಂಭವಾಗಿರೋದು ಬುಟ್ಟು ಉಚಾಯಿಸಿಕ್ಯಂದು ಹಗರಣ ಮಾಡಿಕ್ಯಂದೇ ತಳ್ಳಾಯ್ತರೆ, ಅಕ್ರಮ ಹೆಚ್ಚಿಕ್ಯತವೆ! ಅಕ್ರಮವೂ ಈಗ ಡೆಂಗಿ ಥರ ಜಡ್ಡು ಆಗೋಗ್ಯದೆ’ ಅಂದೆ.

‘ಅದೀಯೆ, ತಿಟ್ಟಿನ ಮ್ಯಾಲೆ ಬದಲಿ ಸೈಟು ತಕ್ಕಂದೋರ ಕಡತಗಳೇ ಎಪ್ಪೆಸ್ ಆಗ್ಯವಂತೆ! ಸಿಬ್ಬಂದಿಗೆಲ್ಲಾ ಇಬ್ಬಂದಿಯಾಗ್ಯದೆ. ಮಿಸ್ಸಿಂಗ್ ಲಿಂಕ್ ಎಲ್ಲ್ಯದೆ ಅಂತ್ಲೆ ಗೊತ್ತಿಲ್ಲವಂತೆ!’ ಚಂದ್ರು ಆಶ್ಚರ್ಯಪಟ್ಟ.

‘ಫಡಫಡಾ ನೀನೇನು ಪಲುಕಿದೆ ಮೂಢಾ! ಧಗಧಗನೆದ್ದಿದೆ ದ್ವೇಷದ ಜ್ವಾಲೆ!’ ತುರೇಮಣೆ ಕಂದಪದ್ಯ ಬಿಸಾಕಿದರು.

ADVERTISEMENT

‘ಬುಡಿ ಅತ್ತಗೆ, ಜೈಲಲ್ಲಿ ಅಣ್ಣನ ತೂಕ ಒಂದೇ ಸಮನೆ ಇಳೀತಾ ಅದಂತೆ. ತಿಂಗಳೊಪ್ಪತ್ತಲ್ಲಿ ಹತ್ತಿಪ್ಪತ್ತು ಕೇಜಿ ಕಮ್ಮಿ ಆಗ್ಯದಂತೆ!’ ಅಂದ ಚಂದ್ರು.

‘ಸಾ, ತೂಕ ಅಂದೇಟಿಗೆ ನನಗೆ ಒಂದು ಐಡೀರಿಯಾ ಬತ್ತಾ ಅದೆ’ ಅಂತಂದೆ.

‘ಅದೇನು ಇಚಾರ ಇಕ್ಕಡಿಕೆ ವತ್ಲಿಸು’ ಅಂದ್ರು ತುರೇಮಣೆ.

‘ಈಚೀಚೆಗೆ ಬಾಡಿ ತೂಕ ಇಳಿಸೋದೇ ಸಕತ್ ಬಿಜಿನೆಸ್ ಆಗ್ಯದೆ. ‘ಒಂದು ಕೇಜಿ ಕೊಬ್ಬು ಇಳಿಸಕ್ಕೆ ಹತ್ತು ಸಾವಿರ ಮಾತ್ರ ಫೀಜು, ಬಲ್ರಿ!’ ಅಂತ ಸ್ಲಿಮ್ಮಿಂಗ್ ಕ್ಲಾಸು ನಡೀತಾ ಅವೆ. ಸರ್ಕಾರ ಇದನ್ನ ಬಳಸಿಗ್ಯಂಡು ವಾರದ್ದು, ತಿಂಗಳದ್ದು ವೇಟ್ ರಿಡಕ್ಷನ್ ಆಪರ್ ಕೊಟ್ಟು, ಕಸ್ಟಮರುಗಳನ್ನ ಜೈಲಲ್ಲಿ ಕುಂದುರ್ಸಿ ಮೂರೊತ್ತೂ ಅದೇ ಊಟ ಕೊಟ್ರೆ ಜನಗಳ ತೂಕವೂ ಇಳಿದು ಇದೊಂದು ಹೊಸಾ ಗ್ಯಾರೆಂಟಿ ಸ್ಕೀಮಾಯ್ತದೆ, ಸರ್ಕಾರದ ಆರ್ಥಿಕ ದರ್ದೂ ಕಮ್ಮಿಯಾತದೆ’ ಪುಸ್ಕಟ್ಟೆ ಐಡಿಯಾ ಕೊಟ್ಟೆ.

‘ಹೂ ಕಯ್ಯ, ಅನುದಾನ ಸಿಕ್ಕತಿದ್ದಂಗೇ ಶಾಸಕರ ಮಕದಲ್ಲೂ ಸಂತೋಷ ಚಿಗುರಾಡ್ತದೆ!’ ಅಂತು ಯಂಟಪ್ಪಣ್ಣ.

‘ಜನದ ತೂಕ ಮೊದಲೇ ಇಳಿದೋಗ್ಯದೆ ಕಾ ಬುಡಿರ್‍ಲಾ. ರಾಜಕೀಯದೋರ ಅಕ್ರಮದ ತೂಕ ಇಳಿಸೋದೇ ಈಗಿನ ಜರೂರತ್ತು. ಹಗರಣ ಮಾಡಿಕ್ಯಂದು, ಟ್ರಿಪ್ಪಿಗೆ ಹೋದಂಗೆ ಜೈಲಿಗೆ ಹೋಯ್ತಾವ್ರೆ. ಅಲ್ಲಿ ಯಾರ್‍ಯಾರ ಓಕಳಿ ಇಟ್ಟಾಡ್ತಾ ಅದೋ!’ ತುರೇಮಣೆ ಸಮಸ್ಯೆ ಮುಂದಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.