ADVERTISEMENT

ಚುರುಮುರಿ: ಪಾನಕಾಯಕ!

ಸುಮಂಗಲಾ
Published 27 ಅಕ್ಟೋಬರ್ 2024, 21:13 IST
Last Updated 27 ಅಕ್ಟೋಬರ್ 2024, 21:13 IST
<div class="paragraphs"><p> ಚುರುಮುರಿ:</p></div>

ಚುರುಮುರಿ:

   

‘ಪಾಪ… ಕುಡುಕರಿಗೆ ಎಲ್ಲಾರೂ ಬೈಯತಾರೆ. ಅವರು ಕುಡೀದಿದ್ದರೆ, ಅಬಕಾರಿ ವರಮಾನ ಇಲ್ಲದಿದ್ದರೆ ಯಾರಿಗಾನ ರಾಜ್ಯಭಾರ ಮಾಡಕ್ಕೆ ಆಗತಿತ್ತಾ?’ ಎಂದು ಬೆಕ್ಕಣ್ಣ ಪಾನಪ್ರಿಯರಿಗೆ ಬೆಂಬಲವನ್ನು ಸೂಚಿಸಿತು.

‘ಈ ಸಲದ ಬ್ಯಾಸಗೀಲಿ ಬಿಸಿಲು ಜೋರಿತ್ತು, ತಂಪಾಗಲೆಂದು ಮಂದಿ ಹೆಚ್ಚು ಬಿಯರ್‌ ಕುಡಿದು, ಅಬಕಾರಿ ಇಲಾಖೆಗೆ ಲಾಭ ತಂದಾರಂತೆ. ಈಗ ಮಳಿ ಆಗಿ, ತಣ್‌ತಣ್‌ಗಿನ ವಾತಾವರಣ ಇದ್ರೂ ಬಿಯರ್‌ಪ್ರಿಯರು ಅದನ್ನ ಬಿಡಾಕೆ ತಯಾರಿಲ್ಲಂತೆ’ ಎಂದು ಸುದ್ದಿ ತೋರಿಸಿತು.

ADVERTISEMENT

‘ಪ್ರತಿವರ್ಷ ವರಮಾನದಲ್ಲಿ ಉತ್ತಮ ಸಾಧನೆ ಮಾಡೂ ಇಲಾಖೆ ಅಂದ್ರೆ ಅಬಕಾರಿ ಇಲಾಖೇನೇ. ಅಬಕಾರಿ ಸಚಿವರು, ಅಧಿಕಾರಿಗಳು ಮತ್ತು ಪಾನಪ್ರಿಯರು ಎಲ್ಲರೂ ಏಕನಿಷ್ಠೆಯಿಂದ ಕೆಲಸ ಮಾಡಿ, ವಾರ್ಷಿಕ ವರಮಾನದ ಗುರಿ ದಾಟುತಾರೆ’ ಎಂದು ನಾನೂ ಹೊಗಳಿದೆ.

‘ಖರೇ ಅಂದ್ರೆ ಅಬಕಾರಿ ಇಲಾಖೆಯ ವರಮಾನ ಹೆಚ್ಚಿಸಿದ ಬಿಯರ್‌ ಕುಡುಕರಿಗೆ ಸನ್ಮಾನ ಮಾಡಬಕು. ಅವರಿಗೆ ಒಂದು ತಗಂಡ್ರೆ ಒಂದು ಫ್ರೀ ಅಂತ ಅಥವಾ ತಿಂಗಳ ಟಾರ್ಗೆಟ್‌ ಮುಟ್ಟಿದವರಿಗೆ ಮುಂದಿನ ತಿಂಗಳಿಗೆ ಸಬ್ಸಿಡಿ ದರದಲ್ಲಿ ಬಿಯರ್‌ ಸಪ್ಲೈ, ಹಿಂಗೆ ಏನರೆ ಯೋಜನೆ ಮಾಡಬಕು’ ಬೆಕ್ಕಣ್ಣ ಭಲೇ ಹುರುಪಿನಿಂದ ವಾದಿಸಿತು.

‘ಆವಾಗ ಮಂದಿ ನೀರು ಬಿಟ್ಟು ಬಿಯರ್‌ ಕುಡಿಯಕ್ಕೆ ಶುರುಮಾಡತಾರೆ ಅಷ್ಟೆ. ಏನೇ ಫ್ರೀ ಕೊಟ್ಟರೂ ವಾರಾಂತ್ಯಕ್ಕೆ ಮಾತ್ರ ಕೊಡಬಕು’.

‘ಅದೂ ಖರೇನೆ. ವರಮಾನಕ್ಕೆ ಇಷ್ಟು ಗಣನೀಯ ಕೊಡುಗೆ ಸಲ್ಲಿಸಿ, ಸರ್ಕಾರಿ ಯಂತ್ರ ಛಲೋತ್ನಾಗೆ ನಡೆಯೋದಕ್ಕೆ ಮೂಲಕಾರಣರು ನಾವು ಅನ್ನೋ ಹಮ್ಮು ಬಿಮ್ಮು ಇಲ್ಲದೇ, ಮಳೆಗೆ ಚಳಿಗೆ ನಡುಗದೇ, ತಮ್ಮ ಪಾಡಿಗೆ ತಾವು ಪಾನಕಾಯಕ ಮಾಡೋ ಪಾನಪ್ರಿಯರನ್ನು ಅಬಕಾರಿ ಇಲಾಖೆ ಕಡೆಗಣಿಸಬಾರದು’.

‘ಹೌದು, ಅವರಿಗೆ ಉಚಿತ ಆರೋಗ್ಯ ಸೇವೆ, ವಿಮಾಸೌಲಭ್ಯ ಇತ್ಯಾದಿ ಕೊಡಬಕು’.

‘ಅಷ್ಟೇ ಅಲ್ಲ, ರಾತ್ರಿ ಪಾನಕಾಯಕ ಮುಗಿದ ಮೇಲೆ ಉಚಿತ ಸಾರಿಗೆ ಸೌಲಭ್ಯ ಕೊಟ್ಟು, ಅವರವರ ಮನೆಗೆ ಬಿಡಬಕು!’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.