ADVERTISEMENT

ಚುರುಮುರಿ: ಪೆನ್‍ಡ್ರೈವ್ ಪ್ರಾಬ್ಲಂ

ಮಣ್ಣೆ ರಾಜು
Published 14 ಮೇ 2024, 19:26 IST
Last Updated 14 ಮೇ 2024, 19:26 IST
<div class="paragraphs"><p>Churumuri</p></div>

Churumuri

   

‘ಕೊರೊನಾ ವೈರಾಣುಗಿಂತ ಪೆನ್‍ಡ್ರೈವ್ ಹೈರಾಣ ಅಪಾಯಕಾರಿಯೇನ್ರೀ?’ ಟಿ.ವಿ. ನ್ಯೂಸ್ ಆಫ್ ಮಾಡಿ ಸುಮಿ ಕೇಳಿದಳು.

‘ಎರಡೂ ಡೇಂಜರ್‍ರೇ, ಒಂದು ಪ್ರಾಣಹಾನಿ, ಇನ್ನೊಂದು ಮಾನಹಾನಿ... ಆದರೆ ಸಾಮಾಜಿಕ ರಗಳೆಯಾದ ಪೆನ್‍ಡ್ರೈವ್ ಕೇಸ್ ಸಾಂಕ್ರಾಮಿಕ ರೋಗಕ್ಕಿಂತ ಅಪಾಯಕಾರಿಯಾಗಿ ಹರಡುತ್ತಾ ರಾಷ್ಟ್ರೀಯ ಸಮಸ್ಯೆ ಆಗಿಬಿಟ್ಟಿದೆಯಂತೆ. ಪೆನ್‍ಡ್ರೈವ್ ಪ್ರಾಬ್ಲಂ ತಡೆಗೆ ಸರ್ಕಾರ ಹೆಣಗಾಡುತ್ತಿದೆಯಂತೆ’ ಅಂದ ಶಂಕ್ರಿ.

ADVERTISEMENT

‘ರಾಜಕಾರಣಿಗಳು, ಮೀಡಿಯಾ ದಿನಬೆಳಗಾದರೆ ಪೆನ್‍ಡ್ರೈವ್ ಪಾರಾಯಣ ಮಾಡುತ್ತಿದ್ದರೆ ಈ ರಗಳೆ ನಿಯಂತ್ರಣಕ್ಕೆ ಬಾರದೆ ಮತ್ತಷ್ಟು ಉಲ್ಬಣ ಆಗೋದಿಲ್ವೇನ್ರೀ? ಇವರೆಲ್ಲಾ ಪೆನ್‍ಡ್ರೈವ್ ಹಿಡಿದು ಹೀಗೇ ಲಾಂಗ್ ಡ್ರೈವ್ ಹೊರಟರೆ... ಈ ಪ್ರಕರಣದ ತರಹೇವಾರಿ ಪುಕಾರು ರಾಷ್ಟ್ರದ ಗಡಿ ದಾಟಿ ಜಾಗತಿಕ ಮಟ್ಟಕ್ಕೂ ಹರಡಿದರೆ ಮರ್ಯಾದೆ ಇರುತ್ತೇನ್ರೀ?’

‘ಪೆನ್‍ಡ್ರೈವ್ ಕೇಸ್‍ನಿಂದ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಪ್ರಕರಣವನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂದು ವಿಪಕ್ಷದವರು ದಬಾಯಿಸುತ್ತಿದ್ದಾರೆ. ಗಂಭೀರವಾಗಿ ಪರಿಗಣಿಸಿದ್ದೇವೆ, ಪೆನ್‍ಡ್ರೈವ್ ಪೀಡೆಯನ್ನು ಬುಡಸಮೇತ ನಿರ್ಮೂಲನೆ ಮಾಡುತ್ತೇವೆ ಎಂದು ಆಡಳಿತ ಪಕ್ಷದವರು ಹೇಳುತ್ತಿದ್ದಾರೆ’.

‘ಈ ಪೆನ್‍ಡ್ರೈವ್ ಪ್ರಕರಣವನ್ನು ಆಡಳಿತ, ವಿರೋಧ ಪಕ್ಷಗಳವರು ರಾಜಕೀಯ ಅಸ್ತ್ರ ಮಾಡಿಕೊಂಡು ಪ್ರಯೋಗಿಸುತ್ತಿರುವುದನ್ನು
ನೋಡಿದರೆ ಈ ಪ್ರಕರಣ ಬಹು ದೊಡ್ಡ ಸಾರ್ವಜನಿಕ ಸಮಸ್ಯೆಯೇ ಆಗಿರಬಹುದು!’

‘ಇರಬಹುದೇನೋ, ಪೆನ್‍ಡ್ರೈವ್ ಪ್ರಕರಣದಿಂದಲೇ ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರಿಗೂ ಸಮಸ್ಯೆಯಾಗಿರಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪೆನ್‍ಡ್ರೈವ್ ದುಷ್ಪರಿಣಾಮ ಬೀರಿರಬಹುದು. ಕಾನೂನು ಸುವ್ಯವಸ್ಥೆ ಹಾಳಾಗಿರಬಹುದು, ಪದಾರ್ಥಗಳ ಬೆಲೆ ಏರಿಕೆಗೂ ಪೆನ್‍ಡ್ರೈವ್ ಕಾರಣವಾಗಿರಬಹುದು’.

‘ಹೌದೌದು. ಈಗಿನ ನಗೆಪಾಟಲಿನ ಪರಿಸ್ಥಿತಿಗೆ ಪೆನ್‍ಡ್ರೈವೇ ಕಾರಣವಾಗಿದೆ. ಪೆನ್‍ಡ್ರೈವ್ ಓಟಕ್ಕೆ ಬ್ರೇಕ್ ಬೀಳುವವರೆಗೂ ನಾವು
ತೆಪ್ಪಗಿರಬೇಕಷ್ಟೇ...’ ಎಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.