ADVERTISEMENT

ಚುರುಮುರಿ | ಸೋಲೋ ಶೋ...

ನಾರಾಯಣ ರಾಯಚೂರ್
Published 31 ಮಾರ್ಚ್ 2024, 23:45 IST
Last Updated 31 ಮಾರ್ಚ್ 2024, 23:45 IST
   

‘ಸೋಲೇ ಗೆಲುವಿನ ಸೋಪಾನ’- ಇವೊತ್ತಿನ ದಿನದ ಸೂಕ್ತಿ ನೋಡ್ರಿ. ಜೀವನದಲ್ಲಿ ‘ಸೋಲು ಬೇಕು’ ಅಂತ ಯಾರು ಬಯಸ್ತಾರೆ?!, ಯಶಸ್ಸು, ಗೆಲುವೇ ಇರಬೇಕು ಅನ್ನೋವ್ರೆ ಎಲ್ಲರೂ’.

‘ಹಾಗೇನಿಲ್ಲ. ಇಲ್ಲಿ ನೋಡು, ತಮಿಳ್ನಾಡಿನಲ್ಲೊಬ್ಬರು ಲೋಕಸಭಾ ಅಭ್ಯರ್ಥಿ ಒಂದಲ್ಲ ಎರಡಲ್ಲ 283 ಬಾರಿ ಛಲ ಬಿಡದ ತ್ರಿವಿಕ್ರಮನಂತೆ ಎಲ್ಲ ಚುನಾವಣೆಗಳಲ್ಲೂ ಸ್ಪರ್ಧೆ ಮಾಡ್ತಾ ಬಂದಿದ್ದಾರಂತೆ!’

‘ಇದ್ರೆ ಇರಬೇಕ್ರಿ ಅವರಂತಹ ಆಶಾವಾದಿ... ಮೆಚ್ಚಬೇಕವರ ತಾಳ್ಮೆಯನ್ನ’ ನಮ್ಮಲ್ಲೂ ಒಬ್ಬರು ಹೊಟ್ಟೆ ಪಕ್ಷದ ರಂಗಸ್ವಾಮಿ ಅಂತ ಇದ್ದರಲ್ರಿ, ಅವರೂ ಗ್ರಾಮ ಪಂಚಾಯಿತಿಯಿಂದ ಹಿಡಿದು ರಾಷ್ಟ್ರಪತಿ ಚುನಾವಣೆವರೆಗೂ ಯಾವುದೇ ಚುನಾವಣೆ ಬಂದ್ರೂ ‘ನಾ ರೆಡಿ’ ಅಂತ ಅಖಾಡಕ್ಕೆ ಇಳಿದೇಬಿಡತಿದ್ರು!’ 

ADVERTISEMENT

‘ಇಲ್ಲಿ ಕೇಳು... ಮೆಟ್ಟೂರಲ್ಲಿ ಒಂದು ಪಂಕ್ಚರ್ ಶಾಪ್ ಇಟ್ಕೊಂಡಿರೊ ಪದ್ಮರಾಜನ್‌ಗೆ ‘ಸೋಲಿನ ರುಚಿ’ಯೇ ಬಲು ರುಚಿ ಅಂತೆ. ಮೂವತ್ತೈದು ವರ್ಷಗಳಿಂದ ಅವರಿಗಂಟಿಕೊಂಡಿರುವ ಈ ಚುನಾವಣಾ ಸೋಲಿನ ಚಕ್ರ, ಬಹಳಷ್ಟು ಪಂಕ್ಚರ್ ಹಾಕಿಕೊಂಡಿದ್ದರೂ ಹಾಗೇ ಉರುಳ್ತಾನೇ ಇದೆಯಂತೆ. ಈ ಬಾರಿನೂ ಅವರು ಸ್ಪರ್ಧೆಗೆ  ಇಳಿದಿದಾರಂತೆ ಧರ್ಮಪುರಿಯಿಂದ’.

‘ಧರ್ಮನಾದ್ರೂ ಅವರನ್ನ ಗೆಲ್ಸುತ್ತೇನೋ ನೋಡಬೇಕು. ಏನೇ ಹೇಳಿ, ಪರೀಕ್ಷೆ ಫೇಲಾಯ್ತು, ಉದ್ಯೋಗ ಸಿಗದೇಹೋಯ್ತು ಅಂತ ಕೊರಗಿ ಏನೇನೋ ಅನಾಹುತ ಮಾಡ್ಕೊಳ್ಳೋವ್ರು ಇವರಿಂದ ಪಾಠ ಕಲಿಬೇಕು’.

‘ಅಷ್ಟೇ ಅಲ್ಲ... ಪದ್ಮರಾಜನ್‌ರ ಈ ಸೋಲಿನ ಸಾಧನೆ ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌’ ಅನ್ನೂ ಸೇರಿ ಪ್ರಸಿದ್ಧಿ ತಂದುಕೊಟ್ಟಿದೆಯಂತೆ’. 

‘ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ’, ಅಂದರೆ, ಹಾಗೋ ಹೀಗೋ ಹ್ಯಾಗೋ ಒಟ್ಟಿನಲ್ಲಿ ಪ್ರಚಾರ, ಪ್ರಸಿದ್ಧಿ ಪಡೀತಿರಬೇಕು ಅಂತ’.

‘ಮಾಡ್ಲಿ ಬಿಡು, ಅವನ ದುಡ್ಡು,ಅವನ ಇಚ್ಛೆ... ಎಷ್ಟೋ ಸೋಗಿನ ಪುಢಾರಿಗಳು, ಜನನಾಯಕ ವೇಷಧಾರಿಗಳು, ಯಾರದೋ ದುಡ್ಡಲ್ಲಿ ಏನೇನೋ ಮಾಡಬಾರದ್ದು ಮಾಡಿ ‘ಷೋ ಮಾಡಿ’ ಮೆರೀತಿರೋವಾಗ, ಇಂತಹ ‘ಸೋಲೋ ಶೋ’ಗಳೂ ಗಮನಾರ್ಹವೇ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.