ADVERTISEMENT

ಚುರುಮುರಿ: ಮತದಾರರ ಉದ್ಧಾರ

ಸುಮಂಗಲಾ
Published 24 ನವೆಂಬರ್ 2024, 23:58 IST
Last Updated 24 ನವೆಂಬರ್ 2024, 23:58 IST
<div class="paragraphs"><p>ಚುರುಮುರಿ</p></div>

ಚುರುಮುರಿ

   

‘ಕಣ್ಣೀರ ಧಾರೆ ಇದೇಕೆ, ಇದೇಕೆ, ಚನ್ನಪಟ್ಟಣದಾ ಗೊಂಬೆ ಈ ಶೋಕವೇಕೆ?’ ಬೆಕ್ಕಣ್ಣ ಹಾಡುತ್ತ ಕಣ್ಣೀರು ಒರೆಸಿಕೊಂಡಿತು.

‘ಯಾಕಲೆ, ಅಷ್ಟ್‌ ದುಃಖಿಸಲಾಕೆ ಹತ್ತೀ?’ ಎಂದೆ ಕರ್ಚೀಪು ಕೊಡುತ್ತ. ‘ಪಾಪ, ನಿಖಿಲಣ್ಣ…’ ಎಂದು ಮತ್ತೆ ಸೊರ್‌ಸೊರ್‌ಗುಟ್ಟಿತು.

ADVERTISEMENT

‘ಹೋಗ್ಲಿಬಿಡಲೇ, ಕೆಲವು ಸಲ ಅದೃಷ್ಟ ಕೈಕೊಡತೈತಿ’ ಎಂದು ಸಂತೈಸಿದೆ.

‘ದೇಗೌ ಅಜ್ಜಾರಿಂದ ಹಿಡಿದು ಕುಮಾರಣ್ಣ ನವರೆಗೆ ಎಲ್ಲಾರೂ ಎಷ್ಟ್‌ ಪ್ರಚಾರ ಮಾಡಿದ್ರು. ಚನ್ನಪಟ್ಟಣ ಉದ್ಧಾರ ಮಾಡತೀವಿ ಅಂದಿದ್ರು. ಒಟ್ಟು ಮತದಾರ‍್ರಿಗೆ ಉದ್ಧಾರ ಆಗೂದು ಬ್ಯಾಡಾಗೈತಿ’ ಅಂತ ನಿಟ್ಟುಸಿರಿಟ್ಟಿತು.

‘ಇನ್ನಾ ನಿಖಿಲಣ್ಣಂಗೆ ಮನಾರ ವಯಸೈತಿ, ಮತದಾರ‍್ರಿನ ಉದ್ಧಾರ ಮಾಡಾಕೆ ಭಾಳ ಅವಕಾಶ ಅದಾವೇಳು. ಇಲ್ಲಿ ಹೋಗಲಿ, ಬ್ಯಾರೆ ಎರಡು ಕಡೆನೂ ಮತದಾರ‍್ರು ಕಮಲಕ್ಕಂಗೆ ಹಿಂಗೆ ಕೈಕೊಡೂದೇನು’.

‘ಕೈ ಪಾಳಯದೋರು ಕೈಬಿಚ್ಚಿ ಹಣದ ಹೊಳೆ ಹರಿಸ್ಯಾರೆ, ಅದಕ್ಕೇ ಗೆದ್ದಾರೇಳು’ ಎಂದು ಮೂತಿ ತಿರುವಿತು.

‘ಆದ್ರೂ ಚನ್ನಪಟ್ಟಣದಾಗೆ ಕಮಲ- ದಳ ದೋಸ್ತಿನೂ ಹಿಂಗೆ ಕೈಕೊಟ್ಟಿತಲ್ಲ’.

‘ಇಲ್ಲಿ ಮತದಾರ‍್ರು ಕೈಕೊಟ್ಟರೇನಾತು, ಮಹಾರಾಷ್ಟ್ರದಾಗೆ ಎಷ್ಟು ಭರ್ಜರಿಯಾಗಿ ಮಹಾಯುತಿನ ಕೈಹಿಡಿದಾರೆ’ ಎಂದು ಮೀಸೆ ತಿರುವಿತು.

‘ಅಲ್ಲೂ ಈಗ ಸಿಎಂ ಕುರ್ಚಿಗಿ ರೇಸ್‌ ನಡದೈತಿ. ಫಡಣವೀಸ್‌ ಮಾತೋಶ್ರೀಯವರು ನನ್ನ ಮಗನೇ ಸಿಎಂ ಎಂದಾರೆ. ಅಜಿತ್‌ ಪವಾರ್‌ ಪತ್ನಿಯವರು ನಮ್ಮ ಪತಿರಾಯರೇ ಸಿಎಂ ಎಂದಾರೆ. ಶಿಂದೇ ಸಾಹೇಬ್ರು, ಯಾರ ಏನರೆ ಹೇಳಲಿ ನಾನೇ ಸಿಎಂ ಅಂದಾರೆ’.

‘ಕುರ್ಚಿಗೆ ಯಾರೇ ಟುವಾಲ್‌ ಹಾಕಿರಲಿ, ಕೊನಿಗೆ ದೆಹಲಿ ಹೈಕಮಾಂಡ್‌ ಹೇಳಿದವರೇ ಸಿಎಂ! ಈಗ ಮತದಾರರು ಯಾರ ಕೈಹಿಡಿದರೇನು, ಯಾರ ಕೈಬಿಟ್ಟರೇನು, ಒಟ್ರಾಶಿ ಆಮೇಲೆ ಮುಂದಿನ ಚುನಾವಣೆವರೆಗೆ ಗೆದ್ದವರು, ಸೋತವರು ಇಬ್ಬರೂ ಮತದಾರರ ಕೈಬಿಟ್ಟಿರತಾರೆ ಅಷ್ಟೆ!’ ಎಂದು ಬೆಕ್ಕಣ್ಣ ಕಣಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.