ಊರಾಗಿನ ಜಮೀನಿಗೆ ಯಾವುದನ್ನಾ ಬೋರ್ಡಿನೋರು ಬೇಲಿ ಹಾಕ್ಕ್ಯಂದವ್ರ ನೋಡಿ ಬರಮು ಅಂತ ಬಸ್ಸತ್ತಿದ್ದೆ. ಕಂಡಕ್ಟರ್ ಟಿಕೆಟ್ ಅಂತ ಒಬ್ಬಕೀನ್ನ ಕೇಳಿದಾಗ, ಆಕೆ ಆಧಾರ್ ತೆಗೆದು ಕಂಡಕ್ಟರ್ ಮಕ್ಕೆ ಹಿಡಿದಳು. ‘ಈಗ ದೊರೆಸಾನಿಯಂಗೆ ಆಧಾರ್ ತೋರುಸ್ತೀಯಲ್ಲ, ನಾಳಾಕೆ ಫ್ರೀ ಶಕ್ತಿ ರದ್ದು ಮಾಡ್ತಾರಂತೆ ಆಗೇನು ಮಾಡೀಯೆ?’ ಅಂತ ತಿವಿದ.
‘ಅಲ್ಲಕಲಾ, ನಂಗೂ ಫ್ರೀ, ನಿಂಗೂ ಫ್ರೀ ಅಂತ ಕೊಟ್ಟುದರಿ. ನಾವೇನು ನಿಮಗೆ ಜುಲುಮೆ ಮಾಡಿದ್ವಾ’ ಅಂದು ಸಪೋರ್ಟಿಗೆ ನನ್ನ ಕಡೆ ನೋಡಿದಳು. ನಾನು ಈ ಉಸಾಬರಿ ನನಗ್ಯಾಕೆ ಅಂತ ಪಕ್ಕದೇಲಿ ಕುಂತಿದ್ದ ಇಬ್ಬರ ಮಾತು ಕೇಳಿಸಿಕಂದು ಕೂತುದ್ದೆ.
‘ಅಲ್ಲ ಕಾ ಅಣ್ತಮ್ಮ, ಗೇಮೆ ಮಾಡದು ಬುಟ್ಟು ಎತ್ತಗೆ ಹೊಂಟಿದೀಲಾ?’ ಒಬ್ಬ ಕೇಳಿದ.
‘ಗೇದು ಯಾಕೆ ಮೈನೋವು ಮಾಡಿಕ್ಯತ್ತೀರಿ ಅಂತ ಎಲ್ಲಾ ಫ್ರೀ ಕೊಡ್ತಾವ್ರಲ್ಲ ಮಾವ. ಈಗ ಎಲೆಕ್ಷನ್ ಬಂದದಲ್ಲಾ, ಸಂತೆ ಬಯಲಿಗೆ ಹೋಗಿ ನಿಂತುಗಂದರೆ ಲಾರೀಲಿ ಪ್ರಚಾರಕ್ಕೆ ಕರಕೋಗಿ ಸಂದೆಗೆ ಬಿರಿಯಾನಿ ಕೊಟ್ಟು ಕೈಗೆ ಏಡು ಸಾವಿರ ಕೊಡ್ತರೆ’ ಅಂದ ಇನ್ನೊಬ್ಬ.
‘ಯಂಗದೆ ಎಲೆಕ್ಷನ್ನು?’
‘ಒಬ್ಬ ಕಣ್ಣಗೆ ನೀರಾಕ್ಕ್ಯತನೆ. ಇನ್ನೊಬ್ಬ ‘ನನಗಾಗಿರೋ ಅನ್ನೇಯ ಸರಿಮಾಡಕ್ಕೆ ನನಗೇ ವೋಟಾಕ್ರಿ’ ಅಂತ ಕೊಸರಾಡತಾವ್ನೆ ಮಾವೋ. ಇನ್ನು ಮೂರು ವರ್ಸದೇಲಿ ಕಂಡಾಬಟ್ಟೆ ಅಭಿವೃದ್ಧಿ ಮಾಡಾರಂತೆ. ಎಲ್ಲಾರಿಗೂ ಇದೇ ಕರ್ಮಭೂಮಿಯಂತೆ’.
‘ಕಾಸು-ಹೆಂಡ ಕೊಟ್ಟು ತೆವಲು ಹತ್ತಿಸ್ಯವರೆ, ಕರ್ಮ ನಮ್ಮದು ಕಪ್ಪಾ!’
‘ಅದೀಯೆ, ನಾಳಾಕೆ ಏನನ್ನ ಜಂಬರ ಅಂತ ಇವರ ಮನೆ ಬಾಗಿಲಿಗೋದ್ರೆ ಇದ್ದೂ ಇಲ್ಲ ಅನ್ನಿಸಿಗ್ಯತರೆ. ಜಬರಿಸಿ ಕೇಳಕ್ಕೋದ್ರೆ ಮ್ಯಾಲೆ ನಾಯಿ ಬುಡ್ತರೆ. ಇವರ ಸವಾಲ್- ಜವಾಬ್ ಜಗಳವೇ ನಡೀತಾದೆ’.
‘ಎಲ್ಲ ಪಕ್ಸದೋರೂ ಜಗಳಾಡಿಕ್ಯಲೀ ಬುಡ್ಲಾ, ಸತ್ಯ ಆಚೆಗೆ ಬತ್ತದೆ’ ಅಂದ ಮಾವನ ಮಾತಿಗೆ ನನ್ನ ಮುಖದಲ್ಲೂ ನಗು ಕಾಣಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.