ADVERTISEMENT

ಚುರುಮುರಿ: ಹೀಗೊಂದು ಕಂಪನ!

ಚಂದ್ರಕಾಂತ ವಡ್ಡು
Published 7 ಅಕ್ಟೋಬರ್ 2024, 23:30 IST
Last Updated 7 ಅಕ್ಟೋಬರ್ 2024, 23:30 IST
   

‘ಬೈ ಟೂ ಕಾಫಿ ಬಳಗ’ದಲ್ಲಿ ತಿಂಗಳೇಶ ಇನ್ನೇನು ಇಸ್ರೇಲ್ ಕ್ಷಿಪಣಿ ಬಿತ್ತು ಎಂಬಂತೆ ಎಚ್ಚರಿಸಿದ: ‘ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ!’

‘ಅದೇನು ಬ್ರೇಕಿಂಗ್ ನ್ಯೂಸ್ ಥರ ಹೇಳ್ತಿ ಬಿಡಪೋ... ಅದು ಪ್ರಗತಿಪರರ ಹಳೆಯ
ಸ್ಲೋ-ಗನ್ನು!’

‘ಹಳೆಯದೇನೋ ಸರಿ. ಆದರೆ ದಸರಾ ಉದ್ಘಾಟನೆಯಲ್ಲಿ ಹಂಪನಾ ಅವರು ಸರ್ಕಾರ ಉರುಳಿಸಬಾರದು ಅಂತ ಪ್ರಜಾಪ್ರಭುತ್ವಪರ ಅನುಕಂಪನಾ ಹುಟ್ಟುಹಾಕಿದ್ದಾರೆ’.

ADVERTISEMENT

‘ಅದರಲ್ಲೇನು ತಪ್ಪಿದೆ... ಚುನಾಯಿತ ಸರ್ಕಾರ ಉರುಳಿಸಬಾರದು ಅಂತ ನಾಡೋಜರು ಸರಿಯಾಗಿಯೇ ಭಾಷಣ ಮಾಡಿದ್ದಾರೆ...’

‘ಅಯ್ಯೋ ಅದು ಹಾಗಲ್ಲ, ಅವರು ಭಾಷಣ ಮಾಡುವ ಬದಲು ಲಿಖಿತ ಭಾಷಣ ಓದಿದ್ದಾರೆ ಕಣಪ್ಪಾ... ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಮಾಡಿದಂತೆ ಇವರೂ ಮಾಡಿದ್ದಾರೆ ಅಂತ ಒಂದಿಷ್ಟು ಜನ ಮಾತಾಡ್ಕಂಡವ್ರೆ’.

‘ಅದೂ ತಪ್ಪಲ್ಲ ಬಿಡು. ಎಷ್ಟೆಂದರೂ ಅದು ಸರ್ಕಾರದ ಅಧಿಕೃತ ಕಾರ್ಯಕ್ರಮ, ಅಧಿಕೃತ ಉದ್ಘಾಟಕರು, ಅಧಿಕೃತ ಮಾತನ್ನೇ ಆಡಿದ್ದಾರೆ’.

‘ವೇದಿಕೆಯಲ್ಲಿ ಸಾಹಿತಿ ಹುಟ್ಟಿಸಿದ ಅನುಕಂಪನಕ್ಕಿಂತ ವಿರೋಧ ಪಕ್ಷದ ಜಿಟಿಡಿ ಹೊರಡಿಸಿದ ಕಂಪನ ದೊಡ್ಡದು... ಅದು ರಿಕ್ಟರ್ ಮಾಪಕದಲ್ಲಿ ಅಳತೆಗೇ ಸಿಕ್ಕಿಲ್ಲವಂತೆ...’

‘ಹೌದೌದು, ಜಿಟಿಡಿ ರಾಜೀನಾಮೆ ಕರೆಗೆ ಎಫ್ಐಆರ್-ರಾಜಕಾರಣಿಗಳ ಅಂತರಾತ್ಮಗಳೆಲ್ಲಾ ಬೆಚ್ಚಿಬೀಳುವಂತಾಗಿದೆ’.

‘ಸಿ.ಎಂ. ಸಿದ್ರಾಮಣ್ಣ ಬೇರೆ ಆತ್ಮಸಾಕ್ಷಿ ನ್ಯಾಯಾಲಯಕ್ಕೆ ಅಪೀಲು ಹಾಕಿಕೊಂಡಿದ್ದಾರೆ... ಆ ಆತ್ಮಸಾಕ್ಷಿ ಪತ್ತೆ ಹಚ್ಚೋದ್ಹೇಗೆ ಎಂಬ ಸಮಸ್ಯೆಯ ಸುಳಿಯಲ್ಲಿ ಮಾಜಿ ಸಿ.ಎಂ. ಬಸಣ್ಣ ಸಿಲುಕಿದ್ದಾರೆ’.

‘ಅದು ಬರೀ ಆತ್ಮಸಾಕ್ಷಿ ಅಲ್ಲ ಮಾರಾಯಾ, ಗಾಂಧಿ ಜಯಂತಿ ದಿನ ಹೊರಬಿದ್ದ ಮಹಾತ್ಮಸಾಕ್ಷಿ!’

‘ಅದೇನೇ ಇರಲಿ, ಎಂಥ ಸಂಕಷ್ಟದ ಸಮಯದಲ್ಲೂ ಈ ರಾಜಕಾರಣಿಗಳಿಗೆ ಆತ್ಮವಿಶ್ವಾಸ ಎಂಬುದಿರುತ್ತದಲ್ಲಾ ಅದಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು’.

‘ಹಾಗೇನಿಲ್ಲ. ಆತ್ಮಸಾಕ್ಷಿ, ಆತ್ಮವಿಶ್ವಾಸ, ಆತ್ಮವಂಚನೆಗಳು ಸಿಬಿಐ, ಸಿಐಡಿ ರೆಡಾರಿಗೆ ಸಿಗೋಲ್ಲ. ಕೊನೆಗೆ ‘ಮಾಫಿಸಾಕ್ಷಿ’ ಆಗೋ ಹವಣಿಕೆ, ಅಷ್ಟೇ!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.