ADVERTISEMENT

ಚುರುಮುರಿ: ನಾನ್ ರಿಕವರಬಲ್

ಪ್ರಜಾವಾಣಿ ವಿಶೇಷ
Published 8 ಅಕ್ಟೋಬರ್ 2024, 23:30 IST
Last Updated 8 ಅಕ್ಟೋಬರ್ 2024, 23:30 IST
   

‘ಕೊಟ್ಟ ಹೇಳಿಕೆ ವಾಪಸ್ ಪಡೆಯುವುದು ಮಾಮೂಲು ಅಲ್ವೇನ್ರಿ?’ ಮಡದಿ ಕೇಳಿದಳು.

‘ಹೇಳಿಕೆ ತಪ್ಪಾಗಿದ್ದರೆ ವಾಪಸ್ ಪಡೆಯುವುದು ಮಾಮೂಲು’ ಎಂದು ಸ್ಪಷ್ಟೀಕರಣ ನೀಡಿದೆ.

‘ಕೆಲವು ಸಲ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದೂ ಸ್ಪಷ್ಟೀಕರಣ ನೀಡಲಾಗುತ್ತದೆ’ ಎಂದಳು.

ADVERTISEMENT

‘ಇನ್ನೂ ಕೆಲವು ಸಲ ಹೇಳಿಕೆ ತಿರುಚಲಾಗಿದೆ ಎಂದೂ ಹೇಳಲಾಗುತ್ತದೆ’ ಎಂದೆ.

‘ಅಂದರೆ ಬಚಾವಾಗೋದಕ್ಕೆ ಅವಕಾಶಗಳಿವೆ ಎಂದರ್ಥ ಅಲ್ಲವೆ?’

‘ಇವೆಲ್ಲಾ ಪ್ರಜಾಪ್ರಭುತ್ವದಲ್ಲಿ ಮಾಮೂಲು. ನಾಯಕರು ಬಚಾವಾಗೋದೇ ಹಾಗೆ, ಇನ್ನೊಂದು ಸ್ಪಷ್ಟೀಕರಣ ಕೊಡಬೇಕಾಗಿ ಬರುವವರೆಗೂ’ ಎಂದೆ.

‘ಕೆಲವು ಸಲ ನಾನು ಹಾಗೆ ಹೇಳೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲದೆ ಹೋದಾಗ ಆ ಹೇಳಿಕೆ ವಾಪಸ್ ಪಡೆಯುತ್ತೇನೆ ಎಂದು ಹೇಳಿ ಬಚಾವಾಗಲು ಪ್ರಯತ್ನಿಸುತ್ತಾರೆ’.

‘ಆದರೆ ಕೆಲವೊಮ್ಮೆ ಮಾಡಿದ್ದನ್ನು ಸರಿ ಮಾಡೋಕೆ ಆಗೋದೇ ಇಲ್ಲ’.

‘ಹಣೆಬರಹದ ತರಹ?’

‘ರೈಟ್. ಉದಾಹರಣೆಗೆ, ಯಾರಿಗಾದರೂ ಕಪಾಳಕ್ಕೆ ನಾಲ್ಕು ಬಾರಿಸಿ ನಂತರ ನಾನು ಬಾರಿಸಿಯೇ ಇಲ್ಲ ಎಂದು ಘಂಟಾಘೋಷವಾಗಿ ಹೇಳಬಹುದು. ಅಥವಾ ನಾನು ಬಾರಿಸಿದ್ದು ತಪ್ಪು ಎಂದು ಪಶ್ಚಾತ್ತಾಪ ಸಹ ಪಡಬಹುದು...’

‘ಆದರೆ ಹೇಳಿಕೆ ವಾಪಸ್ ಪಡೀತೀನಿ ಎಂದು ಹೇಳುವ ಹಾಗೆ ಕಪಾಳಕ್ಕೆ ಬಾರಿಸಿದ್ದನ್ನು ವಾಪಸ್ ಪಡೀತೀನಿ ಎಂದು ಹೇಳಲಿಕ್ಕೆ ಬಾರದು ಅಲ್ವೆ?’

‘ಅಂತಹ ಹೇಳಿಕೆ ಯಾರೂ ಕೊಟ್ಟಂತಿಲ್ಲ’.

‘ಇನ್ನೂ ಒಂದು ಇದೆ ವಾಪಸ್ ಪಡೆಯಲು ಸಾಧ್ಯವಾಗದೇ ಇರುವಂತಹದ್ದು...’

‘ಅದು ಯಾವುದಮ್ಮ?’

‘ಲಾಡು, ಜಿಲೇಬಿ?’

‘!?’

‘ಅದೇರಿ ನಿನ್ನೆ ಹರಿಯಾಣದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ಸೂಚನೆ ಬಂದಾಗ ಲಾಡು, ಜಿಲೇಬಿ ಹಂಚಿದರು. ಎಲ್ಲರೂ ತಿಂದು ಸಂಭ್ರಮಿಸಿದರು. ಆದರೆ ಫಲಿತಾಂಶ ಠುಸ್ ಆಯಿತು. ಸಿಹಿ ವಾಪಸ್ ಪಡೆಯಲು ಸಾಧ್ಯವೆ?’

‘ಇಂಪಾಸಿಬಲ್. ನಾನ್ ರಿಕವರಬಲ್. ಕಪಾಳಕ್ಕೆ ಬಾರಿಸಿದ ಏಟಿನಂತೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.