ADVERTISEMENT

ಚುರುಮುರಿ: ಮ್ಯಾಚ್ ಫಿಕ್ಸಿಂಗ್!

ಬಿ.ಎನ್.ಮಲ್ಲೇಶ್
Published 5 ಏಪ್ರಿಲ್ 2024, 0:06 IST
Last Updated 5 ಏಪ್ರಿಲ್ 2024, 0:06 IST
   

‘ದುಬ್ಬೀರ, ಈ ಮ್ಯಾಚ್ ಫಿಕ್ಸಿಂಗ್ ಅಂದ್ರೆ ಏನ್ಲೆ?’ ಕೊಟ್ರೇಶಿ ಕೇಳಿದ.

‘ಅದೂ ಗೊತ್ತಿಲ್ವಾ? ಅಂಪೈರ್‌ನ ಫಿಕ್ಸ್ ಮಾಡ್ಕಂಡು ಆಟ ಗೆಲ್ಲಾದು ಅಥ್ವ ಬೇಕಂತ ಔಟಾಗಿ ಆಟ ಸೋಲೋದು. ದುಡ್ಡಿಗಾಗಿ ಅಡ್ಡದಾರಿ ಆಟ’ ದುಬ್ಬೀರ ವಿವರಿಸಿದ.

‘ಅದು ಹಂಗೇಳಿದ್ರೆ ಅರ್ಥ ಆಗಲ್ಲ ದುಬ್ಬೀರ, ಎದುರಾಳಿ ಪಕ್ಷಗಳ ಜೊತೆ ಅಡ್ಜಸ್ಟ್ ಮಾಡ್ಕಂಡು ಎಲೆಕ್ಷನ್ ಗೆಲ್ಲಾದು ಅನ್ನು’ ಗುಡ್ಡೆ ಮಂಜಮ್ಮನ ಮುಖ ನೋಡಿ ನಕ್ಕ.

ADVERTISEMENT

‘ಏಯ್ ಯಾಕೋ... ನನ್ ಮುಖ ನೋಡಿ ಯಾಕ್ ನಗ್ತೀಯ?’ ಮಂಜಮ್ಮಗೆ ಸಿಟ್ಟು ಬಂತು.

‘ಇದೊಳ್ಳೆ ಕತಿಯಾತಪ, ನಾನ್ಯಾಕೆ ನಿನ್ ಮುಖ ನೋಡಿ ನಗ್ಲಿ? ನಿನ್ನ ಈ ಡಬ್ಬಾ ಹೋಟ್ಲು ಮುಚ್ಚಿ ನಮ್ ಕ್ಯಾಂಡೇಟ್ ಪರ ಪ್ರಚಾರಕ್ಕೆ ಬಾ, ದಿನಕ್ಕೆ ಸಾವಿರ ರೂಪಾಯಿ ಕೊಡಿಸ್ತೀನಿ’ ಎಂದ ಗುಡ್ಡೆ.

‘ನಿಮ್ ಪಾರ್ಟೀಲಿ ಚಾ ಕುಡಿಯಾಕೂ
ರೊಕ್ಕಿಲ್ಲಂತಲ್ಲೋ, ಇನ್ನು ನಮಿಗೇನು ಕೊಡಿಸ್ತೀಯ ಬದ್ನೇಕಾಯಿ?’ ತೆಪರೇಸಿ ಮಂಜಮ್ಮನ ಪರ ವಾದಿಸಿದ.

‘ಪಾರ್ಟೀಲಿ ರೊಕ್ಕಿಲ್ಲದಿದ್ರೇನಂತೆ,
ಕ್ಯಾಂಡೇಟ್‌ಗಳತ್ರ ಇಲ್ವಾ? ಹೋದ ಎಲೆಕ್ಷನ್‌ನಲ್ಲಿ ಐವತ್ತು ಕೋಟಿ, ಈ ಸಲ ಐನೂರು ಕೋಟಿ ಡಿಕ್ಲೇರ್ ಮಾಡಿರಾದು, ಗೊತ್ತಾ?’

‘ಅಲ್ಲಲೆ, ಐದು ವರ್ಷದಾಗೆ ಐವತ್ತು ಕೋಟಿಯು ಐನೂರು ಕೋಟಿ ಹೆಂಗಾಗ್ತತಲೆ? ಹೆಂಗ್ ದುಡಿದ್ರು ಅಂತ’ ದುಬ್ಬೀರನಿಗೆ ಆಶ್ಚರ್ಯ.

‘ಹೆಂಗ್ ದುಡಿದ್ರಪ, ಎಲ್ಲ ಪಾರ್ಟೀಲು ಕ್ಯಾಂಡೇಟ್‌ಗಳು ಕೋಟಿ ಕೋಟಿ ಆಸ್ತಿ ಡಿಕ್ಲೇರ್ ಮಾಡ್ತಿದಾರೆ. ಆದ್ರೆ ಪಾಪ ನಮ್ ಮೈಸೂರು ಯುವರಾಜರಿಗೆ ಸ್ವಂತಕ್ಕೊಂದು ಮನಿ ಇಲ್ಲಂತೆ’.

‘ಲೇಯ್, ಅವರಿಗೆ ಅರಮನಿನೇ ಐತಲ್ಲೋ. ಈಗ ಅದೆಲ್ಲ ಬಿಟ್ಟಾಕು, ಮಂಜಮ್ಮ ನನ್ ಲೆಕ್ಕದಲ್ಲಿ ಎಲ್ರಿಗೂ ಚಾ ಹಾಕು’ ಎಂದ ಗುಡ್ಡೆ. ಮಂಜಮ್ಮ ಮಾತಾಡಲಿಲ್ಲ.

‘ಓ... ಸಿಟ್ಟು ಬಂತಾ? ಎಂತೆಂಥೋರ ಮುನಿಸು, ಸಿಟ್ಟನ್ನೇ ಶಮನ ಮಾಡೀವಂತೆ, ನಿನ್ ಸಿಟ್ಟು ಇಳ್ಸಾಕೆ ಆ ಬ್ರಹ್ಮನ್ನೇನಾದ್ರೂ ಕರೆಸ್ಬೇಕಾ?’ ಗುಡ್ಡೆ ಮಾತಿಗೆ ಮಂಜಮ್ಮಗೂ ನಗು
ತಡೆಯಲಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.