‘ಪ್ರೈಮರಿ ಶಾಲೆಯಲ್ಲಿ ಚೆನ್ನಬಸಯ್ಯ ಮೇಷ್ಟ್ರ ಮಾತು ಕೇಳಬಾರದಿತ್ತು...’ ಪಶ್ಚಾತ್ತಾಪದಿಂದ ನಿಡುಸುಯ್ದ ಬದ್ರಿ. ಅವನ ದನಿಯಲ್ಲಿ, ಪಕ್ಷಾಂತರ ಮಾಡಿಯೂ ಅಧಿಕಾರ ವಂಚಿತನಾದ ರಾಜಕಾರಣಿಯ ಸಂಕಟವಿತ್ತು.
‘ಯಾಕಪಾ? ಅವರು ಅಷ್ಟು ಕಟ್ಟುನಿಟ್ಟಾಗಿ ಕಲಿ ಸಿದ್ದರಿಂದಲೇ ನೀನು ಇವತ್ತು ಇಂಜಿನಿಯರ್...’
ತಿಂಗಳೇಶನ ಮಾತು ತುಂಡರಿಸಿದ ಬದ್ರಿ, ‘ಸರಿಯಾಗಿ ಓದಿದರೆ ಅಧಿಕಾರಿ ಆಗುತ್ತೀ, ಇಲ್ಲ ದಿದ್ದರೆ ಕತ್ತೆ ಕಾಯಲು ಹೋಗಬೇಕಾಗುತ್ತದೆ ಎಂದಿದ್ದರು ಮೇಷ್ಟ್ರು. ನಾನು ಮೊದಲನೆಯದ್ದು ಆಯ್ಕೆ ಮಾಡಿಕೊಂಡು ತಪ್ಪು ಮಾಡಿದೆ’.
‘ಕತ್ತೆ ಕಾಯಲು ಹೋಗಿದ್ದರೆ ಚೆನ್ನಾಗಿತ್ತೇನು?’
‘ಈಗ ಅತ್ತೆಯ ಕಾಲವೂ ಇಲ್ಲ, ಸೊಸೆಯ ಕಾಲವೂ ಅಲ್ಲ, ಈಗೇನಿದ್ದರೂ ಕತ್ತೆಯ ಕಾಲ! ಕತ್ತೆ ಸಾಕಣೆಯಲ್ಲಿ ಇರುವಷ್ಟು ಲಾಭ ಯಾವುದರಲ್ಲೂ ಇಲ್ಲ. 30 ಮಿಲಿ ಲೀಟರ್ ಕತ್ತೆ ಹಾಲಿಗೆ 150 ರೂಪಾಯಿ ಬೆಲೆ. ಒಂದು ಲೀಟರ್ ಬೆಲೆ ನೀನೇ ಲೆಕ್ಕ ಹಾಕು. ಜನ ಮಾಹಿತಿ ತಂತ್ರಜ್ಞಾನ ಕ್ಷೇತ್ರ ತೊರೆದು ಕತ್ತೆ ಸಾಕ ತೊಡಗಿದ್ದಾರೆ’.
‘ಅಂತೂ ಕತ್ತೆಯ ಕಾಲು ಹಿಡಿಯುವ ಸಮಯ ಬಂದಿದೆ’.
‘ಹಾಲಿಗಷ್ಟೇ ಅಲ್ಲ ಮಾರಾಯ, ಕತ್ತೆಯ ಮೂತ್ರಕ್ಕೂ ಲೀಟರಿಗೆ 600 ರೂಪಾಯಿ ದರ!’
‘ಹಾಗಾದರೆ ಈಗಿನ ಮೇಷ್ಟ್ರು, ‘ಸರಿಯಾಗಿ ಕತ್ತೆ ಕಾಯೋದನ್ನ ಕಲಿಯಿರಿ, ಸ್ವಾವಲಂಬಿ ಜೀವನ ಮಾಡಬಹುದು. ಇಲ್ಲದಿದ್ದರೆ ಅಧಿಕಾರಿಯಾಗಿ ಕತ್ತೆಯಂತಹ ರಾಜಕಾರಣಿಗಳ ಕಾಲು ಹಿಡಿಯಬೇಕಾಗುತ್ತದೆ’ ಎಂದು ಬೋಧಿಸಬಹುದು’.
‘ಈ ಸತ್ಯವನ್ನು ಕತ್ತೆಗಳ ಮೆರವಣಿಗೆ ಮೂಲಕ ಸಾರಲು ವಾಟಾಳು ಬಹುಕಾಲದಿಂದ ಪ್ರಯತ್ನಪಟ್ಟರು. ಜನ ಅರ್ಥ ಮಾಡಿಕೊಳ್ಳಲಿಲ್ಲ!’
‘ವೇದ ಸುಳ್ಳಾಯಿತೋ ಇಲ್ಲವೋ ಕಾಲಕ್ಕೆ ತಕ್ಕಂತೆ ಗಾದೆಯಂತೂ ಬದಲಾಗಿದೆ. ‘ಅತ್ತೆಗೊಂದು ಕಾಲ, ಕತ್ತೆಗೊಂದು ಕಾಲ’.
‘ಮೂರು ಕೊಟ್ಟರೆ ಹಸುವಿನ ಹಾಲು, ಆರು ಕೊಟ್ಟರೆ ಕತ್ತೆ ಹಾಲು’, ‘ಕತ್ತೆಯ ಕಾಲಾದರೂ ಹಿಡಿ ಅಥವಾ ಕತ್ತೆಯ ಹಾಲಾದರೂ ಕುಡಿ!’ ತಿಂಗಳೇಶನೂ ಕೆಲವು ಗಾದೆಗಳನ್ನು ತಿರುಚಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.