ADVERTISEMENT

ಚುರುಮುರಿ: ‘ಅತಿಥಿ’ ಅಳಲು!

ಮಣ್ಣೆ ರಾಜು
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
   

‘ಸರ್ಕಾರದ ಗಮನ ಸೆಳೆಯಲು ಇವತ್ತು ತಮಟೆ ಬಾರಿಸಿ ಚಳವಳಿ ಮಾಡ್ತೀವಿ’ ಅಂದ್ರು ಅತಿಥಿ ಉಪನ್ಯಾಸಕ ಶಂಕ್ರಿ.

‘ನಿನ್ನೆ ಪ್ರತಿಭಟನಾ ಸ್ಥಳದಲ್ಲಿ ತರಕಾರಿ ಮಾರಾಟ ಮಾಡಿದ್ರಿ, ಅಲ್ವಾ? ವ್ಯಾಪಾರದಲ್ಲಿ ಲಾಭ ಬಂತಾ?’ ಪತ್ನಿ ಸುಮಿ ಕೇಳಿದರು.

‘ಹೌದು. ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಅಹವಾಲು ಸ್ವೀಕರಿಸಿ, ತರಕಾರಿಯನ್ನೂ ಕೊಂಡುಕೊಂಡರು, ನನಗೆ ನೂರೈವತ್ತು ರೂಪಾಯಿ ಲಾಭ ಬಂತು, ಮನೆ ಖರ್ಚಿಗೆ ಇಟ್ಟುಕೋ’ ದುಡ್ಡು ಕೊಟ್ಟರು.

ADVERTISEMENT

‘ಅತಿಥಿ ಉಪನ್ಯಾಸಕ್ಕಿಂತ ತರಕಾರಿ ಮಾರುವುದೇ ಲಾಭದಾಯಕ ಕಣ್ರೀ!’

‘ನಮ್ಮ ಕೆಲ ಉಪನ್ಯಾಸಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು’.

‘ಲಂಚ್ ಬಾಕ್ಸ್ ಕೊಡ್ತೀನಿ, ಪ್ರತಿಭಟನೆ ಬ್ರೇಕ್‍ನಲ್ಲಿ ಊಟ ಮಾಡಿಕೊಳ್ಳಿ’.

‘ಬೇಡ, ನಾವು ಉಪವಾಸ ಇರುತ್ತೇವೆ’.

‘ನೀವು ಉಪವಾಸವಿದ್ದರೆ ನನಗೆ ಊಟ ಸೇರುತ್ತೇನ್ರೀ? ಮನೇಲಿ ನಾನೂ ಉಪವಾಸವಿದ್ದು ಮೌನ ಪ್ರತಿಭಟನೆ ಮಾಡ್ತೀನಿ’.

‘ಮುಂದಿನ ಹಂತದ ಹೋರಾಟದಲ್ಲಿ ಉಪನ್ಯಾಸಕರ ಕುಟುಂಬದವರೂ ಪಾಲ್ಗೊಳ್ಳಲು ಅವಕಾಶ ಇರುತ್ತೆ, ಆಗ ಮಾಡುವೆಯಂತೆ’.

‘ಶಾಲೆ ಬಿಟ್ಟ ಮಕ್ಕಳನ್ನು ‘ಮರಳಿ ಬಾ ಶಾಲೆಗೆ’ ಎಂದು ಕರೆಯುವ ಸರ್ಕಾರ, ‘ಮರಳಿ ಬಾ ಕಾಲೇಜಿಗೆ’ ಅಂತ ಅತಿಥಿ ಉಪನ್ಯಾಸಕರನ್ನು ಕರೆಯಲಿಲ್ವಾ?’

‘ಬೇಡಿಕೆ ಈಡೇರಿಸಿದರೆ ಕರೆಯದಿದ್ದರೂ ಹೋಗ್ತೀವಿ’.

‘ಬಾಕಿ ಇರುವ ಫೀಸ್ ಕಟ್ಟಿ ಎಂದು ಮಗಳ ಸ್ಕೂಲ್ ಟೀಚರ್ ಫೋನ್ ಮಾಡಿದ್ರು’.

‘ನನಗೂ ಫೋನ್ ಮಾಡಿದ್ರು. ಫೀಸ್ ಕಟ್ಟದಿದ್ದರೆ ಆಡಳಿತ ಮಂಡಳಿಯವರು ನಮ್ಮ ಸಂಬಳ ಕಟ್ ಮಾಡ್ತಾರೆ ಅಂತ ಗೋಳಾಡಿದರು’.

‘ಮೂರು ತಿಂಗಳ ಮನೆ ಬಾಡಿಗೆ ಬಾಕಿ ಇದೆ. ಬಾಡಿಗೆ ಕೊಡಿ ಇಲ್ಲವೆ ಮನೆ ಖಾಲಿ ಮಾಡಿ, ಇಲ್ಲದಿದ್ದರೆ ಮನೆ ಮುಂದೆ ಜಾಗಟೆ ಬಾರಿಸಿ ಗಲಾಟೆ ಮಾಡ್ತೀವಿ ಅಂತ ಓನರ್ ಹೆಂಡ್ತಿ ಆವಾಜ್ ಹಾಕಿದ್ರೂರೀ’ ಸುಮಿ ಕಳವಳಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.