ADVERTISEMENT

ಚುರುಮುರಿ| ನೋಟು ನಾಪತ್ತೆ

ಸಿ.ಎನ್.ರಾಜು
Published 21 ಜೂನ್ 2022, 19:31 IST
Last Updated 21 ಜೂನ್ 2022, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ದೊಡ್ಡ ಮನೆಯಿದ್ದರೂ ದುಡ್ಡು ಇಡಲು ಸೇಫ್ಟಿ ಜಾಗ ಸಿಗ್ತಿಲ್ಲ, ಟಾಯ್ಲೆಟ್ಟು, ಡಸ್ಟ್‌ಬಿನ್‌, ರೈನ್‍ವಾಟರ್ ಪೈಪ್‍ಗಳಲ್ಲಿ ಇಟ್ಟು ಕಾಪಾಡಿಕೊಳ್ಳೋ ದುರ್ಗತಿ ಬಂದಿದೆಯಲ್ರೀ ಮನಿಮಂದಿಗೆ...’ ನ್ಯೂಸ್ ಪೇಪರ್ ಓದುತ್ತಾ ಅನು ಹೇಳಿದಳು.

‘ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ಇದ್ದಿದ್ದರೆ ಬಾತ್‍ರೂಂ, ಬೆಡ್‍ರೂಂನಂತೆ ದುಡ್‍ರೂಂ ಕಟ್ಟಿಸಿಕೊಳ್ತಿದ್ರು. ಅವಕಾಶವಿಲ್ಲದೆ ಇಡಬಾರದ ಜಾಗದಲ್ಲಿ ದುಡ್ಡು ಇಟ್ಟು ನಿದ್ರೆ, ನೆಮ್ಮದಿಯಿಲ್ಲದೆ ಪರದಾಡ್ತಾರೆ’ ಅಂದ ಗಿರಿ.

‘ಕಳ್ಳರು ನುಗ್ಗಿ ದುಡ್ಡು ದೋಚಿಕೊಂಡು ಹೋಗ್ತಾರೆ ಅನ್ನೋ ಭಯನಾ? ಕಾವಲು ಗಾರರು, ಕಾಂಪೌಂಡ್, ದಪ್ಪ ಬೀಗ, ಬೊಗಳೋ ನಾಯಿಗಳ ಕಾವಲಿದ್ದಾಗ ಭಯ ಯಾಕೆ?’

ADVERTISEMENT

‘ಅದಲ್ಲಾ, ಎಸಿಬಿ, ಆದಾಯ ತೆರಿಗೆಯವರು ಎಲ್ಲಾ ಸೆಕ್ಯೂರಿಟಿ ಭೇದಿಸಿ ನುಗ್ತಾರೆ. ಲೆಕ್ಕಕ್ಕೆ ಸಿಗದ ಹಣವನ್ನು ಲೆಕ್ಕ ಹಾಕಿಕೊಂಡು ತಗೊಂಡು ಹೋಗ್ತಾರೆ ಅನ್ನೋ ಭಯ...’

‘ಹೌದುರೀ, ದಾಳಿ ಅಧಿಕಾರಿಗಳು ಮನೆಗೆ ನುಗ್ಗಿದ್ದಾರೆ ಕಾಪಾಡಿ ಅಂತ ಬಾಯಿ ಬಡಕೊಂಡರೂ ನೆರೆಹೊರೆಯವರು ಸಹಾಯಕ್ಕೆ ಬರೊಲ್ಲ, ಪೊಲೀಸರು ಬಂದರೂ ದಾಳಿಗೆ ಬಂದವರ ಪರವಾಗೇ ಬರ್ತಾರೆ... ಏನೇ ಆದರೂ ದುಡ್ಡನ್ನು ಬಚ್ಚಿಡಬಾರದೂರಿ, ಗಾಳಿಬೆಳಕು ಇಲ್ಲದ ಕಡೆ ಇಟ್ಟರೆ ದುಡ್ಡಿನ ಮಾನ, ಮೌಲ್ಯ ಹಾಳಾಗುತ್ತೆ’.

‘ಹೌದು, ನೋಟಾಗಲಿ, ವ್ಯಕ್ತಿಯಾಗಲಿ ಚಲಾವಣೆಲಿರಬೇಕು. ಇಲ್ಲದಿದ್ದರೆ ಬೆಲೆ, ಬಣ್ಣ ಕಳೆದುಕೊಂಡು ಮಂಕಾಗಬೇಕಾಗುತ್ತೆ’.

‘ಎರಡು ವರ್ಷದಿಂದ ಎರಡು ಸಾವಿರ ರೂಪಾಯಿ ನೋಟುಗಳ ಚಲಾವಣೆ ಕಮ್ಮಿಯಾಗಿದೆ ಅಂತ ಅಂಕಿಅಂಶಗಳು ಹೇಳ್ತಿವೆ ಕಣ್ರೀ. ದೊಡ್ಡ ನೋಟುಗಳು ದೊಡ್ಡವರ ಖಜಾನೆ ಸೇರಿಬಿಟ್ಟಿವೆಯಾ ಅಂತ ಅನುಮಾನ’.

‘ಇರಬಹುದು, ನಾಪತ್ತೆಯಾದ ನೋಟುಗಳನ್ನು ಸರ್ಕಾರ ಪತ್ತೆ ಮಾಡಿ ಬೆಳಕಿಗೆ ತರಬೇಕು. ಇಲ್ಲಾಂದ್ರೆ ಚಲಾವಣೆಗೆ ಬಾರದೆ ಕನಕಾಂಬರ ಕಲರ್ ನೋಟುಗಳು ಬಣ್ಣ ಕಳೆದುಕೊಂಡು ಕಪ್ಪುಹಣವಾಗುವ ಅಪಾಯವಿದೆ...’ ಅಂದ ಗಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.