‘ನೀವು ಉದ್ಧಾಮ ಪಂಡಿತರೇ ಇರಬಹುದು, ವೇದಿಕೆ ಮೇಲೆ ಭಾಷಣ ಮಾಡುವಾಗ ಆಡುವ ಮಾತಿನ ಮೇಲೆ ನಿಗಾ ಇರಲಿ...’ ಮೂರ್ಖರ ದಿನಾಚರಣೆಯ ಹಾಸ್ಯೋತ್ಸವ ಭಾಷಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಗಂಡನಿಗೆ ಸುಮಿ ಹೇಳಿದಳು.
‘ನಗೆರಂಜನೆಗಳಿಲ್ಲದೆ ಬರಗೆಟ್ಟಿರುವ ಜನ ಹಾಸ್ಯ ಕಾರ್ಯಕ್ರಮಗಳಿಗೆ ಹಲ್ಲು ಉಜ್ಜಿಕೊಂಡು, ಮನಸು ಬಿಚ್ಚಿಕೊಂಡು ನಗಲು ಸಿದ್ಧರಾಗೇ ಬರ್ತಾರೆ, ಸಣ್ಣ ಜೋಕಿಗೂ ದೊಡ್ಡದಾಗಿ ನಕ್ಕು ಆನಂದಿಸುತ್ತಾರೆ’ ಎಂದ ಶಂಕ್ರಿ.
‘ಓವರ್ ಕಾನ್ಫಿಡೆನ್ಸ್ ಬೇಡ, ಜನ ಈಗ ನಗುವ ಪರಿಸ್ಥಿತಿಯಲ್ಲಿಲ್ಲ, ಈಗ ನಕ್ಕರೆ ಕಾಯಿಲೆಯವರೇ ಜಾಸ್ತಿ. ಸಾಧಾರಣ ಜೋಕಿಗೆ ಹಲ್ಲು ಬಿಡುವುದಿಲ್ಲ. ಪ್ರೇಕ್ಷಕರ ಮನಃಸ್ಥಿತಿ, ಪರಿಸ್ಥಿತಿಗೆ ತಕ್ಕಂತಹ ಜೋಕ್ ಹೇಳಿ. ನಗೆಪಾಠ ಹೇಳಲು ಬಂದ ಎಷ್ಟೋ ಜನ ನಗೆಪಾಟಲಿ
ಗೀಡಾಗಿದ್ದಾರೆ’.
‘ಆತಂಕ ಪಡಬೇಡ, ನನ್ನಲ್ಲಿ ಲೋಡುಗಟ್ಟಲೆ ನಗೆ ಬಾಂಬು, ಹಾಸ್ಯ ಚಟಾಕಿ ಸ್ಟಾಕ್ ಇವೆ. ವೇದಿಕೆ ಮೇಲೆ ಒಂದೊಂದನ್ನೇ ಸಿಡಿಸಿದರೆ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಕ್ಕು ನರಳುತ್ತಾರೆ. ಬಹಳಷ್ಟು ಕಾರ್ಯಕ್ರಮಗಳಲ್ಲಿ
ಜನರನ್ನು ನಗಿಸಿ ಪ್ರಸಿದ್ಧನಾಗಿದ್ದೇನೆ. ನಗೆ ಅಭಿಮಾನಿಗಳು ನನಗೆ ನಗ್ಸಲಿಯ ಪ್ರಶಸ್ತಿ ನೀಡಿದ್ದಾರೆ’ ಶಂಕ್ರಿ ಬೀಗಿದ.
‘ಭಾಷಣಕಾರರಿಗೆ ಹಾಸ್ಯ ಪ್ರಜ್ಞೆ ಜೊತೆಗೆ ಮೈಮೇಲೆ ಪ್ರಜ್ಞೆ, ಮೈಕ್ ಪ್ರಜ್ಞೆಯೂ ಇರಬೇಕು. ಭಾಷಣವನ್ನು ಪ್ರೇಕ್ಷಕರು ಕೇಳುತ್ತಿದ್ದಾರೆ, ಆ ಭಾಷಣ ಟೀವಿ, ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ ಎಂಬ ಅರಿವೂ ಇರಬೇಕು. ಹೋದ ವಾರದ ಕಾರ್ಯಕ್ರಮದಲ್ಲಿ ನೀವು ನಾಲಿಗೆ ಚಟಕ್ಕೋ ಪ್ರಾಸದ ಹಟಕ್ಕೋ ಮಾತು ಹರಿಯಬಿಟ್ಟು ಮಾಡಿಕೊಂಡ ಯಡವಟ್ಟು ಸಾಮಾಜಿಕ ಜಾಲತಾಣದಲ್ಲಿ ಇವತ್ತಿಗೂ ಮಾನ ಕಳೆಯುತ್ತಲೇ ಇದೆ...’
ಶಂಕ್ರಿ ಗಾಬರಿಯಾದ.
‘ಮಾತು ಮಾರಕವಾದಾಗ ತಕ್ಷಣ ಎಚ್ಚೆತ್ತುಕೊಂಡು, ‘ಏಪ್ರಿಲ್ ಫೂಲ್...’ ಅಂದುಬಿಡಿ, ಜನ ಸಿಂಪಥಿ ನಗೆ ನಕ್ಕು ಸಹಿಸಿಕೊಳ್ತಾರೆ...’ ಎಂದು ಸಲಹೆ ಕೊಟ್ಟಳು ಸುಮಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.