‘ಗುರೂ ನ್ಯೂಸ್ ನೋಡಿದ್ಯಾ, ಡ್ರಗ್ಸ್ ತಗಂಡಿರಾದು ಕೂದಲ ಪರೀಕ್ಷೆಯಿಂದ ಗೊತ್ತಾಗುತ್ತಂತೆ. ವಿಚಿತ್ರ ಅಲ್ವ?’ ತೆಪರೇಸಿನ ಗುಡ್ಡೆ ಕೇಳಿದ.
‘ವಿಚಿತ್ರ ಯಾಕೆ, ಕೂದಲು ಅಂದ್ರೆ ಏನಂತ ತಿಳ್ಕಂಡಿದಿ? ಬರೀ ಕೂದಲು ನೋಡೇ ಈ ಮನುಷ್ಯ ಹಿಂಗೆ ಅಂತ ಹೇಳಿಬಿಡಬಹುದು...’ ತೆಪರೇಸಿ ತನ್ನ ಪಾಂಡಿತ್ಯ ಪ್ರದರ್ಶಿಸಿದ.
‘ಹೌದಾ ಅದ್ಹೆಂಗೆ?’
‘ನೋಡಿದ್ರೆ ಗೊತ್ತಾಕ್ಕತಿ, ತೆಲಿ ಮ್ಯಾಲ ಕೂದಲು ಜಾಸ್ತಿ ಇದ್ರೆ ಒಂದರ್ಥ, ಬೋಳು ತೆಲಿ ಇದ್ರೆ ಇನ್ನೊಂದರ್ಥ. ಮೂಗಿನ ಕೆಳಗೆ ಮೀಸಿ ಬರದೇ ಇದ್ರೆ ಮತ್ತೊಂದರ್ಥ. ಹೆಣಮಕ್ಕಳಿಗೆ ಉದ್ದ ಕೂದಲಿದ್ರೆ ತಾಳ್ಮೆ ಹೆಚ್ಚು ಅಂತ ಅರ್ಥ...’
‘ಅಲೆ ಇವ್ನ, ಹಂಗೆಲ್ಲ ಇರ‍್ತಾವೇನಲೆ...’
‘ಮತ್ತೆ ಏನಂತ ತಿಳಿದಿ? ಊಟದಾಗೆ ಕೂದಲು ಸಿಕ್ರೆ ಅವತ್ತಿನ ಅಡುಗಿ ಮಾಡಿದ್ಯಾರು, ಅವರ ವಯಸ್ಸೆಷ್ಟು ಎಲ್ಲ ಹೇಳಿಬಿಡಬಹುದು...’
‘ಅದು ಗೊತ್ತು, ಆದ್ರೆ ಕೂದಲಿನಾಗೆ ಡ್ರಗ್ಸ್ ಹೆಂಗೆ ಗೊತ್ತಾಕ್ಕತಿ ಅಂತ... ಡ್ರಗ್ಸ್ ತಗಂಡಿರೋರ ಕೂದಲು ತೇಲಾಡ್ತರ‍್ತಾವೇನು?’
‘ಇಲ್ಲ, ವಾಲಾಡ್ತರ‍್ತಾವು. ನಿನ್ನ ಕಣ್ಣು ನೋಡಿದ್ರೆ ನೀ ಎಷ್ಟ್ ಕುಡಿದಿದಿ ಅಂತ ಗೊತ್ತಾಗಲ್ಲೇನು, ಹಂಗೇ ಇದು...’
‘ನನ್ ಬುಡಕ್ಕೇ ಬಂದ್ಯಲ್ಲಲೆ... ಹೋಗ್ಲಿ ಬಿಡಪ್ಪ, ಕೂದಲ ಬಗ್ಗೆ ಮತ್ತೆ ಏನೇನ್ ತಿಳ್ಕಂಡಿದಿ?’
‘ಈ ದೇಶದ ಎಕಾನಮಿ ನಡೀತಿರೋದೇ ಕೂದಲ ಮ್ಯಾಲೆ. ಸೋಪು, ಶಾಂಪು, ಹೇರಾಯಿಲ್ಲು ಎಲ್ಲ ಕೋಟಿ ಕೋಟಿ ಬಿಸಿನೆಸ್ಸು. ಕೂದಲಿದ್ರೆ ಅಷ್ಟೇ ಅಲ್ಲ, ಬೋಳಿಸಿದ್ರೂ ಕೋಟಿಗಟ್ಲೆ ದುಡ್ಡು...’
‘ಬೋಳಿಸಿದ್ರಾ? ಅದ್ಹೆಂಗೆ?’
‘ದೇವರಿಗೆ ಮುಡಿಕೊಟ್ಟ ಕೂದಲು ತಿರುಪತೀಲಿ ಕೋಟಿಗಟ್ಲೆ ದುಡ್ಡಿಗೆ ಹರಾಜಾಗ್ತತಿ ಗೊತ್ತಿಲ್ಲೇನು?’
‘ಹೌದಲ್ಲಲೆ, ನಾನು ಈ ಜುಜುಬಿ ಕೂದಲು ಯಾವನ್ ತಗಂತಾನೆ ಅನ್ಕಂಡಿದ್ದೆ. ನೀನ್ಯಾಕೆ ಈ ಕೂದಲಿನ ಮ್ಯಾಲೆ ಒಂದು ಡಾಕ್ಟರೇಟ್ ಮಾಡಬಾರ್ದು?’ ಗುಡ್ಡೆ ನಕ್ಕ.
‘ಯಾಕೆ? ಆಮೇಲೆ ನೀವೆಲ್ಲ ನನ್ನ ‘ಕೂದಲಿನ ಡಾಕ್ಟ್ರು’ ಅಂತ ತಮಾಷೆ ಮಾಡೋಕಾ?’ ತೆಪರೇಸಿಗೂ ನಗು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.