ADVERTISEMENT

ಚುರುಮುರಿ: ಸಾಲಭೈರವರು

ಲಿಂಗರಾಜು ಡಿ.ಎಸ್
Published 8 ಆಗಸ್ಟ್ 2022, 22:45 IST
Last Updated 8 ಆಗಸ್ಟ್ 2022, 22:45 IST
   

‘ಬೆಂಗಳೂರೇಲಿ ಮಳೆ ಬಂದ್ರೆ ಕಾರು ಉಪಯೋಗಕ್ಕಿಲ್ಲ ಸಾ! ಅದುಕ್ಕೇ ನಾನು ಟ್ರಾಕ್ಟರ್ ತಗಬೇಕು ಅಂತಿದ್ದೀನಿ. ನೀವೇ ಜಾಮೀನಾಗಿ ನಿಮ್ಮ ಬ್ಯಾಂಕೇಲಿ ಸಾಲ ಕೊಡ್ಸಿ’ ಅಂತ ತುರೇಮಣೆಗೆ ಕೇಳಿದೆ.

‘ನಿನಗೆ ಜಾಮೀನಾಗಿ ನನ್ನ ಆಸ್ತಿ ಹರಾಜಿಗೆ ಬಂದ್ರೆ ಬೀಜೆಪಿ ಥರಾ ನಿದ್ದೆಗೆಡಿಸಿಕೋ ಅಂದೀಯಾ!’ ತುರೇಮಣೆ ಸಿದ್ದರಾಮೋತ್ಸವದ ನಗು ನಕ್ಕರು.

‘ಐದು ವರ್ಸದೇಲಿ ಬ್ಯಾಂಕುಗಳು ಸಾವ್ಕಾರ್‍ರು ತಗಂಡಿದ್ದ 9.91 ಲಕ್ಷ ಕೋಟಿಯಷ್ಟು ಸಾಲದ ವಸೂಲಾತಿಯನ್ನ ಬಹುತೇಕ ಕೈಬಿಟ್ಟವರಂತೆ! ಇವುಕ್ಕೆಲ್ಲಾ ಜಾಮೀನುದಾರರು ಇರನಿಲ್ವೇನೋ?’ ಅಂತು ಯಂಟಪ್ಪಣ್ಣ.

ADVERTISEMENT

‘ರೈತರು ಐದು ಲಕ್ಸದ ಸಣ್ಣ ಸಾಲ ಕೇಳಿದ್ರೆ ‘ನಿನಗೆ ತೀರಿಸೋ ಯೇಗ್ತೆ ಇಲ್ಲ’ ಅಂತ ನಮ್ಮಪ್ಪನಾಣೆ ಕೊಡಲ್ಲ. ‘ನಮ್ಮೂರ ಗದ್ದೆ ಬೈಲಲ್ಲಿ ವಜ್ರದ ಪ್ಯಾಗುಟ್ರಿ ಮಾಡ್ತೀನಿ, ಸಾವಿರಾರು ಜನಕ್ಕೆ ಕೆಲಸ ಸಿಕ್ತದೆ, ಎರಡು ಸಾವಿರ ಕೋಟಿ ರೂಪಾಯಿ ಸಾಲ ಕೊಡ್ರಿ’ ಅಂತ ಪುಂಗಿದ್ರೆ ಜಾಮೀನೇ ಇಲ್ದೆ ಸಾಲ ಸಿಕ್ತದೆ’ ಅಂದ್ರು.

‘ದೊಡ್ಡ ಮನುಸ್ರು ಸಾಲ ತೀರಿಸಕಾಗದಿದ್ರೆ ಸರ್ಕಾರ ಕನಿಕರ ತೋರಿಸಿ ನಮ್ಮ ದುಡ್ಡು ಬ್ಯಾಂಕಿಗೆ ಕೊಟ್ಟು ಸಾಲ ತೀರಿಸ್ತದಂತೆ!’ ಅಂತ ಚಂದ್ರು ಸರ್ಕಾರದ ದುಃಖಪ್ರಾರಬ್ಧ ವಿವರಿಸಿದ.

‘ಸರ್ಕಾರಗಳೂ ಪೈಪೋಟಿ ಮ್ಯಾಲೆ ಸಾಲ ಎತ್ತತವೆ. ಇಂಥಾ ಸಾಲಗಾರಿಕೆಯಿಂದ ನಮ್ಮ ಮ್ಯಾಲೆ ಲಕ್ಷಗಟ್ಟಲೇ ಸಾಲ ಅದುಗಿಕಂಡದೆ. ಸಾಲಕ್ಕೆ ಯಾರ್‍ಯಾರೋ ನಾಮ ಇಕ್ಕಿ ದೇಸ ಬುಟ್ಟು ಓಡೋದ್ರೆ ದೇಸದ ಜನದ ಮ್ಯಾಲೆ ತಲಾ 7,280 ರುಪಾಯಿ ಹೊಸ ಸಾಲ ಬಂದು ಅಮರಿಕ್ಯತಲ್ಲೋ’ ಅಂತು ಯಂಟಪ್ಪಣ್ಣ.

ರೈತರು ಸಾಲ ತೀರಿಸಲಾರದೆ ಪರಿತಪಿಸ್ತಿರುವಾಗ ಜಿಲ್ಲೆ, ತಾಲ್ಲೂಕಲ್ಲಿ ಕೋಲ್ಡ್ ಸ್ಟೋರೇಜ್ ಮಾಡಿ ಗೊಬ್ಬರ, ಒಳ್ಳೇ ಬಿತ್ತನೆ ಬೀಜ ಕೊಟ್ಟು ಅನುಕೂಲ ಮಾಡೋ ಬದಲು ಯಾರ್‍ಯಾರದ್ದೋ ಸಾಲ ತೀರಿಸೋ ಸರ್ಕಾರದ ಕಾರುಬಾರು ನೋಡಿ ಕಣ್ಣಿಂದ ಸಾಲಭಾಷ್ಪಗಳು ಉದುರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.