ADVERTISEMENT

ಚುರುಮುರಿ: ಕ್ಷಮಿಸಿಬುಡಿ...

ಲಿಂಗರಾಜು ಡಿ.ಎಸ್
Published 18 ನವೆಂಬರ್ 2024, 20:33 IST
Last Updated 18 ನವೆಂಬರ್ 2024, 20:33 IST
.
.   

ನಮ್ಮ ಸಂಘದ ನೆಂಬ್ರು ಮಿರಾಜಣ್ಣ ಯಾವಾಗ್ಲೂ ಹಂಗೀಯೆ. ಮನಸ್ಸಿಗೆ ಬಂದುದ್ನೆ ಯಬಡತಬಡ ಮಾತಾಡಿ ಎಲ್ಲರ ತಾವು ಬೋಗುಳ ತಗತನೆ. ಕೊನೆಗೆ ‘ನಾಲಗೆ ಜಾರಿಬುಟ್ಟದೆ ಕ್ಷಮಿಸಿ’ ಅಂತ ಕೇಳಿಗ್ಯತ್ತನೆ.

ಮೊನ್ನೆ ಆಗಿದ್ದು ನಿಮಿಗೆ ಗೊತ್ತಲ್ಲ. ಸುಮ್ಮಗೆ ಇರನಾರದೆ ಇರುವೆ ಬುಟ್ಕೊಂಡಂಗೆ ‘ಮಾಜಿ ಅಧ್ಯಕ್ಷರನ್ನ ನಾನು ಬಾಲಾ ಮರಿಯ ಅಂತ್ಲೇ ಕರಿಯದು’ ಅಂದುದ್ದ. ಜೊತೆಗೆ ‘ಅವರು ನನ್ನನ್ನ ಸುಳ್ಳ ಅಂತ ಕರೀತಿದ್ರು. ಅವರಿಗೇನಾದ್ರೂ ಬೇಜಾರಾಗಿದ್ರೆ ಕ್ಷಮಿಸಿಬುಡಿ’ ಅನ್ನೋ ಕ್ಲಾರಿಫಿಕೇಶನ್ ಬ್ಯಾರೆ ಕೊಟ್ಟಿದ್ದ.

ಕಮಿಟಿ ಎಲೆಕ್ಷನ್ನಲ್ಲಿ ಈ ಮಾತು ಯಂಗೆಂಗೋ ತಿರಿಕ್ಕತ್ತು. ಇದುಕ್ಕೆ ಮಾಜಿ ಅಧ್ಯಕ್ಷರು ‘ಆವಯ್ಯನ್ನ ನೋಡಿದರೆ ಸುಳ್ಳ ಅಂತ ಗೊತ್ತಾಯ್ತದೆ. ಅದುನ್ನ ಬಾಯಿಬುಟ್ಟು ಹೇಳಬೇಕಾ’ ಅಂದ್ರು.

ADVERTISEMENT

‘ಹಂಗಾಮ, ಹಂಗಾಮ ಆಯ್ತದೆ. ನಾನು ಹೋಗಿ ಮುದ್ದಣ್ಣನ ಮನೆ ಬಾಗಿಲಿಗೆ ವದ್ದು ಕೇಳ್ತೀನಿ’ ಅಂದುತ್ತಲ್ಲ ಹೋದೊರ್ಸ. ಪತ್ರಕರ್ತ
ರೆಲ್ಲಾ ‘ಇದೇನಣೈ ಹಿಂಗೆ ಮಾತಾಡ್ತಿರಾ?’ ಅಂತ ಕೇಳೊವೊತ್ಗೆ ‘ತಪ್ಪಾಗ್ಯದೆ ಕ್ಷಮಿಸಿಬುಡಿ’ ಅಂದುತ್ತು. ಈಥರಕೀಥರ’ ಅಂತ ತಿಪ್ಪಣ್ಣಗೆ ಕತೆ ಹೇಳಿದ್ದೆ.

‘ಕ, ಕು, ಕೆ, ಕೊ ಅಂತೆಲ್ಲಾ ಬೆಟ್ಟಿಂಗ್ ಜೋರಾಗ್ಯದೆ. ಬೇಜಾರಾಗಿದ್ರೆ ಕ್ಷಮಿಸಿಬುಡಿ’ ಯಂಟಪ್ಪಣ್ಣ ಶಿಷ್ಟಾಚಾರ ತೋರಿಸಿತು.

‘ಅಣ್ತಮ್ಮ ಇಲ್ಕೇಳು. ಎನ್‍ಎಸ್‍ಜಿ ನಡೆಸಿದ ಕಚ್ಚಾಬಾಂಬ್ ಪತ್ತೆ ಸ್ಪರ್ಧೆಯಲ್ಲಿ ಕರ್ನಾಟಕ ಪೊಲೀಸ್ ಮೊದಲನೇ ಸ್ಥಾನ ತಗಂಡದಂತೆ’ ತಿಪ್ಪಣ್ಣ ಸುದ್ದಿ ಸ್ಫೋಟಿಸಿದ.

‘ಇವೆಲ್ಲಾ ಬಾಂಬುಗಳಿಗಿಂತ ರಾಜಕಾರಣಿಗಳು ಸುಮ್ಮಗಿರನಾರದೇ ಸಿಡಿಸೋ ಕಚಡಾ ಬಾಂಬುಗಳು ನಮ್ಮನ್ನ ಬೆಳಗಾನ ರೋಸ್ತವೆ. ಬೇಜಾರಾಗಿದ್ರೆ ಕ್ಷಮಿಸಿಬುಡಿ’ ಅಂತಂದೆ.

‘ವಡೀರಿ ಕಪಾಳಕ. ರಾಜಕಾರಣಿಗಳು ಯಂಗನ್ನ ಮಾಡಿ ಅಧಿಕಾರ ತಗಣಕ್ಕೆ, ಗೇಯಕ್ಕೆ ಲಾಯಕ್ಕಿಲ್ಲದ ಶಾಸಕರನ್ನ ಕದಿಯಕ್ಕೆ ಹೋಗಿ ಕದೀರಿ ಯವಾರ ಮಾಡಿಕ್ಯಂದು, ದಳ್ಳಾಳಿ ಗಳಿಗಿಂತ ಅತ್ತತ್ತ ಆಗ್ಯವೆ. 2019ರಲ್ಲಿ ಇದೇ ಹುಚ್ಚುತನ ಆಗಿತ್ತಲ್ಲಾ. ನೀವೂ ಬೇಜಾರಾಗಿದ್ರೆ ಕ್ಷಮಿಸಿಬುಡಿ’ ತಿಪ್ಪಣ್ಣ ಶಾಂತಿವಾದ ಮಂಡಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.