ADVERTISEMENT

ಬಲೂನು ಬೇಹುಗಾರಿಕೆ

ಸುಮಂಗಲಾ
Published 12 ಫೆಬ್ರುವರಿ 2023, 21:00 IST
Last Updated 12 ಫೆಬ್ರುವರಿ 2023, 21:00 IST
Churumuri==13022023
Churumuri==13022023   

ಚೀನೀ ಬಲೂನುಗಳನ್ನು ಅಮೆರಿಕ ಹೊಡೆದುರುಳಿಸಿದ್ದನ್ನು ಬೆಕ್ಕಣ್ಣ ಬಿಟ್ಟೂಬಿಡದೆ ಓದುತ್ತಿತ್ತು.

‘ಅಮೆರಿಕದ ಆಕಾಶದಾಗೆ ಚೀನಾ ಬಲೂನು ಬಿಟ್ಟಿದ್ದು ಸರೀನಾ ಅಥ್ವಾ ತನ್ನ ಆಕಾಶದಾಗೆ ಹಾರುತ್ತಿದ್ದ ಬಲೂನನ್ನು ಅಮೆರಿಕ ಹೊಡೆದು ಉರುಳಿಸಿದ್ದು ಸರೀನಾ’ ಬೆಕ್ಕಣ್ಣ ಮೀಸೆ ಸವರುತ್ತ ಕೇಳಿತು.

‘ಎರಡೂ ಸರಿ ಮತ್ತು ಎರಡೂ ತಪ್ಪು’ ನಾನು ಪೊಲಿಟಿಕಲಿ ಕರೆಕ್ಟ್ ಆದ ಉತ್ತರ ಕೊಟ್ಟೆ.

ADVERTISEMENT

‘ಬೇರೆ ದೇಶದ ಆಕಾಶದಲ್ಲಿ ಬೇಹುಗಾರಿಕೆ ಬಲೂನು ಬಿಡದೇನೋ ತಪ್ಪು. ಆದರೆ ನಮ್ಮ ದೇಶದ ಆಕಾಶದಲ್ಲಿ ನಾವೇ ಬೇಹುಗಾರಿಕೆ ಬಲೂನು ಬಿಟ್ಟರೆ ತಪ್ಪೇನಿಲ್ಲ, ಹೌದಿಲ್ಲೋ?’ ಬೆಕ್ಕಣ್ಣ ಜಾಣತನದ ಪ್ರಶ್ನೆ ಎಸೆಯಿತು.

‘ನಮ್ಮ ಮ್ಯಾಗೆ ನಾವೇ ಎದಕ್ಕ ಬೇಹುಗಾರಿಕೆ ಮಾಡೂಣು?’

‘ಚುನಾವಣೆ ಟೈಮಿನಾಗೆ ಬೇಹುಗಾರಿಕೆ ಬೇಕಾಗತೈತಿ. ದಿಲ್ಲಿಯಿಂದ ಬಂದವ್ರು ಗುಪ್ತ ಸಭೆ ಮಾಡ್ತಾರಲ್ಲ, ಆವಾಗ ಸಭೆ ನಡೀತಿರೋ ಜಾಗದ ಮ್ಯಾಗೆ ಎದುರಾಳಿ ಪಕ್ಷದವರು ಒಂದು ಬಲೂನು ಹಾರಿಸಿ, ಒಳಗಿದ್ದವರು ಏನೇನು ಮಾತುಕತೆ ನಡೆಸಿದ್ರು ಅಂತ ಕೇಳಬೌದು’ ಬೆಕ್ಕಣ್ಣ ಬಲೂನು ಬೇಹುಗಾರಿಕೆಯ ಪ್ಲಾನ್ ಹೇಳಿತು.

‘ಅಷ್ಟೇ ಯಾಕೆ... ಒಂದೇ ಪಕ್ಷದಾಗೆ ಭಿನ್ನಮತೀಯರೂ ಹಿಂಗೆ ಮಾಡಬೌದು. ಹಾಸನದಾಗೆ ಭವಾನಕ್ಕನ ಪಾಳೆಯದೊಳಗೆ ಏನು ನಡೀತೈತೆ ಅಂತ ಕುಮಾರಣ್ಣ ಇಲ್ಲಿ ಕುಂತೇ ಬಲೂನು ಹಾರಿಸಿ ತಿಳೀಬೌದು’.

‘ಸಿದ್ದು ಅಂಕಲ್ ಮತ್ತೇನು ಕಂತ್ರಾಟು ನಡೆಸಿಯಾರೆ ಅಂತ ನೋಡಾಕೆ ಡಿಕೆಶಿ ಅಂಕಲ್ಲು ಬಲೂನು ಹಾರಿಸಬೌದು. ಹಳೇಹುಲಿ ಯೆಡ್ಯೂರಜ್ಜಾರು ಮತ್ತೇನು ದಾಳ ಉರುಳಿಸಬೌದು ಅಂತ ನೋಡಾಕೆ ಬೊಮ್ಮಾಯಿ ಅಂಕಲ್ಲು ಬಲೂನು ಹಾರಿಸಬೌದು’.

‘ಮತದಾರ್‍ರ ಮನಸ್ಸಿನಾಗೆ ಏನೈತೆ ಅಂತ ತಿಳಿಯಾಕೆ ಎಲ್ಲ ಪಕ್ಷದವ್ರೂ ಬಲೂನು ಹಾರಿಸಬೌದು. ಹಂಗಾರೆ ಚುನಾವಣೆ ಹೊತ್ತಿಗೆ ಆಕಾಶದ ತುಂಬ ಸಾವಿರಾರು ಬಲೂನು’ ಎಂದು ನಕ್ಕೆ.

‘ಆದರೆ ಅಭ್ಯರ್ಥಿಗಳು ಹಾರಿಸಿದ ಹಂತಾ ಬಲೂನುಗಳಿಗೆ ಎಲ್ಲಿ ಸೂಜಿ ಚುಚ್ಚಿ, ಹೆಂಗ ಠುಸ್ಸೆನ್ನಿಸಬೇಕು ಅಂತ ಮತದಾರ್‍ರಿಗೆ ಗೊತ್ತಿರತೈತೆ ಬಿಡು’ ಎನ್ನುತ್ತ ಬೆಕ್ಕಣ್ಣನೂ ಮುಸಿಮುಸಿ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.