‘ಕ್ಲರ್ಕ್’ ಕೆಲಸಕ್ಕೆ ಅರ್ಜಿ ಹಾಕಿದ್ದ ವಿಜಿ, ಪುಸ್ತಕಗಳಿಗಿಂತ ನ್ಯೂಸ್ ಪೇಪರ್‌ಗಳನ್ನೇ ಹೆಚ್ಚು ಓದಿದ್ದ. ಅವನ ‘ಜನರಲ್ ನಾಲೆಜ್’ ಬಗ್ಗೆ ಅವನಿಗೇ ಹೆಮ್ಮೆ ಇತ್ತು. ಹುರುಪಿನಿಂದಲೇ ಪರೀಕ್ಷೆಗೆ ಹಾಜರಾದ.
ಮೊದಲ ಪ್ರಶ್ನೆ. ಮೈತ್ರಿ ಎಂದರೇನು...?
ಕ್ವಿಂಟಲ್‌ಗಟ್ಟಲೆ ಮೆಣಸಿನಕಾಯಿ ತಿಂದಷ್ಟು ಭೀಕರವಾಗಿ ಹೊಟ್ಟೆ ಉರಿಯುತ್ತಿದ್ದರೂ, ತಲೆಯಲ್ಲಿ ತಂತ್ರ-ಕುತಂತ್ರವೇ ಮನೆ ಮಾಡಿದ್ದರೂ, ಎಲ್ಲವೂ ನಿಮಗೋಸ್ಕರವೇ ಎಂದು ಜನರನ್ನು ನಂಬಿಸಿ ನಗುತ್ತಾ ಅಪ್ಪಿಕೊಳ್ಳುವುದೇ ಮೈತ್ರಿ!
ಎರಡನೇ ಪ್ರಶ್ನೆ. ಅಮ್ಮ-ಮಗ, ಅತ್ತೆ- ಅಳಿಯ, ಗುರು-ಶಿಷ್ಯ ಸಂಬಂಧಗಳನ್ನು ಸಂದರ್ಭಸಹಿತ ವಿವರಿಸಿ.
ಚುನಾವಣೆ ಎಂಬ ಹಬ್ಬ ಬಂದಾಗ, ಎಳ್ಳು-ಬೆಲ್ಲದ ಆಸೆಗೆ ಮರುಳಾಗಿ ಗುರು-ಶಿಷ್ಯರ ಕಿವಿಯಲ್ಲಿ ಕಮಲ ಇಟ್ಟು, ತಾಯಿ-ಮಗನಿಗೆ ಬೇವು ತಿನ್ನಿಸುವವರೇ ಅತ್ತೆ-ಅಳಿಯ
(ಬುವಾ- ಭತೀಜ).
ತನ್ನ ಉತ್ತರ ಓದಿಕೊಂಡು ತಾನೇ ಬೆನ್ನು ತಟ್ಟಿಕೊಂಡ ವಿಜಿ.
ಮುಂದಿನ ಪ್ರಶ್ನೆ. ಮಂಗ, ಗೊರಿಲ್ಲಾ, ಮಂತ್ರಿ, ರಾಜಕಾರಣಿ- ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?
ಉತ್ತರ- ಯಾವುದೂ ಇಲ್ಲ. ಕಾರಣ, ಮಂತ್ರಿಗಳು, ರಾಜಕಾರಣಿಗಳು ಇವುಗಳನ್ನು ಪ್ರೀತಿಯಿಂದ ಬಳಸುತ್ತಿರುವುದರಿಂದ ಭವಿಷ್ಯದಲ್ಲಿ ಇವೆಲ್ಲವೂ ಸಮಾನಾರ್ಥಕ ಪದಗಳಾಗಲಿವೆ!
ಕೊನೆಯ ಪ್ರಶ್ನೆ. ‘ಕ್ಲರ್ಕ್’ ಹುದ್ದೆಯ ಮಹತ್ವವೇನು...?
ಶ್ರೀಮಾನ್ ಪ್ರಧಾನಿಯವರ ನಾಲಗೆಯ ಮೇಲೆ ನಲಿದಾಡಿದ ಹಿರಿಮೆ ಹೊಂದಿರುವ ಪದ ಕ್ಲರ್ಕ್. ರಾಜ್ಯದ ಮುಖ್ಯಮಂತ್ರಿಗೆ ಸಮನಾದ ಹುದ್ದೆ! ಬಿಜೆಪಿಯವರ ಗೇಲಿಗೆ ವಸ್ತುವಾಗುವ, ಕಾಂಗ್ರೆಸ್ಸನ್ನು ಪರೋಕ್ಷವಾಗಿ ಚುಚ್ಚುವ, ಜೆಡಿಎಸ್ ಅನ್ನು ಅಣಕಿಸಲು ಬಳಸಬಹುದಾದ ಅಪರೂಪದ ಪದ ಕ್ಲರ್ಕ್!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.