ADVERTISEMENT

ಚುರುಮುರಿ: ಕನ್ನಡ ಮೆಡಿಸಿನ್

ಮಣ್ಣೆ ರಾಜು
Published 13 ಸೆಪ್ಟೆಂಬರ್ 2024, 19:30 IST
Last Updated 13 ಸೆಪ್ಟೆಂಬರ್ 2024, 19:30 IST
.
.   

‘ವೈದ್ಯರು ಕನ್ನಡದಲ್ಲಿ ಔಷಧಿ ಚೀಟಿ ಬರೆಯುವ ಪದ್ಧತಿ ಬರಬೇಕು ಎಂಬ ಒತ್ತಾಯ ಹೆಚ್ಚಾಗ್ತಿದೆ ಕಣ್ರೀ’ ಅಂದಳು ಸುಮಿ.

‘ಹೌದು, ಕೊಡುವವರಿಗೂ ಕೊಳ್ಳುವವರಿಗೂ ಔಷಧಿ ಹೆಸರು ಅರ್ಥವಾಗಲಿ ಅಂತ’ ಅಂದ ಶಂಕ್ರಿ.

‘ಹೌದು, ಇಂಗ್ಲಿಷ್ ಪ್ರಭಾವದಲ್ಲಿ ವೈದ್ಯಕೀಯ ಕ್ಷೇತ್ರದ ಕನ್ನಡ ಅನಾರೋಗ್ಯಕ್ಕೀಡಾಗಿದೆ. ಭಾಷಾ ಔಷಧಿ ಕೊಟ್ಟು ಕನ್ನಡಕ್ಕೆ ಶಕ್ತಿ ತುಂಬಬೇಕು. ಮೆಡಿಕಲ್ ಅನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಕನ್ನಡ ಬೆಳೆಸಲು, ಕನ್ನಡಿಗರನ್ನು ಉಳಿಸಲು ನೆರವಾಗಬೇಕು’.

ADVERTISEMENT

‘ಇಂಗ್ಲಿಷ್ ಹೆಸರಿನ ಕಾಯಿಲೆ, ಔಷಧಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡೋದು ಕಷ್ಟವಾದರೆ ಇಂಗ್ಲಿಷ್ ಹೆಸರನ್ನೇ ಕನ್ನಡದಲ್ಲಿ ಬರೆಯುವಂತಾದರೂ ಸಾಕು ನಮ್ಮಂತಹ ಸಾಮಾನ್ಯರಿಗೆ ಸಹಾಯವಾಗುತ್ತದೆ’.

‘ಇಂಗ್ಲಿಷ್ ಹೆಸರಿನ ಔಷಧಿಯನ್ನು ಕನ್ನಡದಲ್ಲಿ ಸ್ಪೆಲಿಂಗ್ ತಪ್ಪಿಲ್ಲದೆ ಚೀಟಿ ಬರೆಯಲು ವೈದ್ಯರು ಕನ್ನಡ ಕಾಗುಣಿತ ಜ್ಞಾನ ಬೆಳೆಸಿಕೊಳ್ಳಬೇಕಾಗುತ್ತದೆ’.

‘ವೈದ್ಯಕೀಯ ಶಿಕ್ಷಣದಲ್ಲೂ ಕನ್ನಡ ಮೀಡಿಯಂ ಇದ್ದಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ’.

‘ಕನ್ನಡ ಮೀಡಿಯಂ ಸಾಧ್ಯವಾಗದಿದ್ದರೆ ಬೇಡ, ಮೆಡಿಕಲ್ ಸಿಲೆಬಸ್‍ನಲ್ಲಿ ಔಷಧ ವಿಜ್ಞಾನದ ಕನ್ನಡ ಪಠ್ಯವನ್ನು ಅಳವಡಿಸಿದರೆ ವೈದ್ಯರು ಕನ್ನಡ ಔಷಧಿ ಚೀಟಿ ಬರೆಯಲು ಅನುಕೂಲವಾಗುತ್ತದೆ, ಕನ್ನಡದ ಆರೋಗ್ಯವೂ ಸುಧಾರಿಸುತ್ತದೆ’.

‘ರೂಪಾಯಿ ನೋಟಿನ ಮೇಲೆ ಪ್ರಾದೇಶಿಕ ಭಾಷೆ ಇರುವಂತೆ ಔಷಧಿ, ಮಾತ್ರೆ ಪ್ಯಾಕೆಟ್ ಮೇಲೆ ಕನ್ನಡದಲ್ಲಿ ಹೆಸರು ಮುದ್ರಿಸಿದರೆ ರೋಗಿಗಳಿಗೂ ಅವರನ್ನು ನೋಡಿಕೊಳ್ಳುವವರಿಗೂ ಔಷಧಿ ಅರ್ಥವಾಗುತ್ತದೆ’.

‘ವೈದ್ಯರ ಔಷಧಿ ಚೀಟಿಯ ಇಂಗ್ಲಿಷ್ ಬರಹ ಇಂಗ್ಲಿಷ್ ಬಲ್ಲವರಿಗೇ ಅರ್ಥವಾಗುವುದಿಲ್ಲ, ಡಾಕ್ಟರ್‌ಗಳ ಕೈಬರಹ ಜನಸಾಮಾನ್ಯರಿಗೂ ಅರ್ಥವಾಗಬೇಕು ಅಲ್ವೇನ್ರೀ?’

‘ಹಾಗಂತ, ಕನ್ನಡ ಕಾಪಿರೈಟಿಂಗ್ ಬರೆದು ಹ್ಯಾಂಡ್‌ರೈಟಿಂಗ್ ಇಂಪ್ರೂವ್ ಮಾಡಿಕೊಳ್ಳಿ ಅಂತ ಡಾಕ್ಟರ್‌ಗಳಿಗೆ ಹೇಳೋದು ಉದ್ಧಟತನವಾಗುತ್ತದೆ, ಸುಮ್ನಿರು!’ ಶಂಕ್ರಿ ಎಚ್ಚರಿಸಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.