ರೈತ ರಂಗಣ್ಣ ಖಾಲಿ ದೊಗಲೆ ಚಡ್ಡಿ ಹಾಕ್ಕೊಂಡು ಊರ ಬೀದೀಲಿ ಹೋಗ್ತಾ ಅವ್ನೆ. ಜನಗೊಳೆಲ್ಲ ಅವ್ನ ಚಡ್ಡಿ ನೋಡಿ ಕಣ್ ಕಣ್ ಬಿಡ್ತಾವ್ರೆ. ಎರಡೂ ಜೇಬು ತುಂಬ ನೋಟಿನ ಕಟ್ಟು ತುಂಬ್ಕಂಡ್ ಜಬರ್ದಸ್ತಾಗಿರೋವ್ನ ಕಂಡು ಪರಮೇಶಿ ಕೇಳೇಬಿಟ್ಟ, ‘ಅಣ್ಣ, ಈಟೊಂದು ದುಡ್ಡು! ಕಳ್ತನ ಗಿಳ್ತನ ಮಾಡ್ಕಂಡ್ ಬರ್ತಾ ಇದೀಯ ಎಂಗೆ?’
ರಂಗಣ್ಣ ರೇಗಿದ. ‘ಏಯ್ ಯೋನು ಹಂಗೇಳ್ತೀಯ? ನನ್ನೇನು ಬರೀ ಪುಟಗೋಸಿ ರೈತ ಅಂದ್ಕೊಂಡ? ಈಗ ಬಡ ರೈತ ಅನ್ನೋ ಮಾತೇ ಓಗಿಬುಟ್ಟದೆ. ವರ್ಸಕ್ಕೆ ಆರು ಸಾವ್ರ ರೈತ ಸಮ್ಮಾನ್ ದುಡ್ ತಗಳ್ಳೊ ರೈತ ಬಡವನಾಗಿ ಇರೋದ್ ಹೆಂಗ್ ಸಾಧ್ಯ? ನಮ್ಮನಿಗೆ ಬಂದು ನೋಡ್ರೋ, ಆರೇಳು ಕೋಟಿ ಕಾಲ್ ಮುರ್ಕಂಡ್ ಬಿದ್ದಿರ್ತದೆ’ ಪರಮೇಶಿ ಮುಸುಡಿಗೆ ತಿವಿದು ಯೋಳ್ದ.
ತಿಮ್ಮನಿಗಂತೂ ಕುತೂಹಲ ತಡೀಕಾಗ್ದೆ ‘ಯೋ ಅಣ್ಣೋ, ಕಿಸಾನ್ ಸಮ್ಮಾನ್ ಅಣ ನಂಗೂ ಬತ್ತದೆ ಕಣಣ್ಣ. ಬೆಳಿಗ್ಗೆ ಬಂದ ಅಣ ಸಂಜಿ ಹೊತ್ಗೆ ಖಾಲಿನೂ ಆಗೋಯ್ತದೆ. ಆದ್ರೆ ನಿಮ್ ಮನೀಲಿ ಕೋಟಿ ಕೋಟಿ ಎಂಗೋ? ಅದೇನ್ ಮರಿ ಇಟ್ಟದೇ? ವಸಿ ನಂಗೂ ಹೇಳಪ್ಪ, ನಾನೂ ನಿನ್ನಂಗೆ ಹರಕಲು ಚಡ್ಡಿ ಹಾಕಿದ್ರೂ ಮನೆ ತುಂಬ ಮನಿ ಇಟ್ಟುಬುಡ್ತೀನಿ’ ಅಂಗಲಾಚಿದ.
‘ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೋದ್ ಕೇಳಿಲ್ಲವೇನ್ಲಾ? ದುಡೀದೆ ದುಡ್ ಆಗ್ತದೇನ್ಲಾ? ನಿನ್ನಂಗೆ ನನ್ ತಾವ ಇರೋದೂ ಒಸಿ ತ್ವಾಟ ಅಷ್ಟೇ. ಆದ್ರೂ ಮನಿಯಾಗೆ ಕೋಟಿ ಕೋಟಿ ಚೆಲ್ಲಾಡ್ತಾದೆ. ನನ್ ಮಗ ತಲೆದಿಂಬಾಗೆ ನೋಟಿನ ಕಟ್ಟು ಇಟ್ಕಂಡ್ ಮಲಗ್ತಾವ್ನೆ. ಬರೀ ಅಡಿಕೆ ಕೃಷಿ ಮಾಡಿ ಅಡಿಕೆ ಮಾರಾಟದಿಂದ ಈಟೊಂದ್ ಹಣ ಬಂದೈತೆ ಕಣ್ಲ’ ರಂಗಣ್ಣ ವಿವರಿಸಿದ.
ಎಲ್ಲ ರೈತರ ಕಿವಿಗಳೂ ಚುರುಕಾದವು. ‘ಅಣ್ಣ, ಕೋಟಿ ಕೋಟಿ ಬರೋ ಅಡಿಕೆ ತಳಿ ಯಾವುದೂಂತ ನಮ್ಗೂ ಒಂದೀಟು ಯೋಳ್ತೀಯಾ? ನಾವೂ ನಿನ್ನಂಗೆ ದುಡ್ ಮಾಡಿ ಯೋಚ್ನೆ ಇಲ್ದೆ ಬದುಕ್ತೀವಿ’ ಅಂಗಲಾಚಿದರು.
‘ಸುಮ್ಕಿರ್‍ರೋ’ ಎಂದ ಪರಮೇಶಿ ಅಲ್ಲಿಂದ ಹೊರಡುತ್ತ ಎಲ್ಲರನ್ನೂ ಕರೆದು ಗುಟ್ಟಾಗಿ ಹೇಳ್ದ ‘ಇವ್ನು ಬೆಳೆದಿರೋ ತಳಿಯ ಬೀಜವೂ ಸಿಗಲ್ಲ. ಕೃಷಿಯ ಗುಟ್ಟೂ ತಿಳಿಯಕಿಲ್ಲ. ಅದು ಯಾರಿಗೂ ಸಿಗದಿರೋ ತಳಿ. ಈಗ ಹೊಸದಾಗಿ ಕಂಡು ಹಿಡಿದಿರೋ ‘ಕೋಟಿ ಕೊಡುವ ಮಾಡಾಳ್ ಅಡಿಕೆ ತಳಿ!’ ಅಂದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.