‘ಲೇ ಗುಡ್ಡೆ, ಮೊನ್ನಿ ಚನ್ನಗಿರಿಗೆ ಯಾವುದೋ ಮೆರವಣಿಗಿಗೆ ಹೋಗಿದ್ಯಂತಲ್ಲ, ಎಷ್ಟು ಕೊಟ್ರು?’ ದುಬ್ಬೀರ ಕೇಳಿದ.
‘ಲೇಯ್, ಅದು ದುಡ್ಡಿನ ಮೆರವಣಿಗಿ ಅಲ್ಲ, ಬೇಲ್ ಮೆರವಣಿಗಿ... ವಿಜಯೋತ್ಸವ...’ ಗುಡ್ಡೆ ಆಕ್ಷೇಪಿಸಿದ.
‘ಬೇಲ್ ಮೆರವಣಿಗಿನಾ? ಅದೆಂಥದಲೆ ಅದು?’
‘ನಿನ್ತೆಲಿ, ನೀನಿನ್ನೂ ಬಾಳ ತಿಳಿಯೋದೈತಿ. ಮೆರವಣಿಗೀಲಿ ಎಷ್ಟ್ ನಮೂನಿ ಅದಾವು ಗೊತ್ತಾ? ಜಾಮೀನು ಸಿಕ್ಕಾಗ ಬೇಲ್ ಮೆರವಣಿಗಿ, ಜೈಲಿಗೆ ಹೋಗೋವಾಗ ಜೈಲ್ ಮೆರವಣಿಗಿ, ಎಲೆಕ್ಷನ್‌ನಲ್ಲಿ ನಾಮಿನೇಶನ್ ಮೆರವಣಿಗಿ, ಗೆದ್ದ ಮೇಲೆ ವಿಜಯೋತ್ಸವದ ಮೆರವಣಿಗಿ... ಇನ್ನೂ ಏನೇನೋ...’ ಗುಡ್ಡೆ ವಿವರಿಸಿದ.
‘ಅಲ್ಲೋ ಗುಡ್ಡೆ, ಜೈಲಿಗೋಗೋ ಮೆರವಣಿಗೀಲಿ ಕೆಲವರು ಎರಡು ಬೆರಳು ಅಲ್ಲಾಡಿಸ್ತಾ ಹೋಗ್ತಾರಲ್ಲ ಯಾಕೆ?’ ಕೊಟ್ರೇಶಿ ಕೇಳಿದ.
‘ಅದು ವಿಕ್ಟರಿ ಸಿಂಬಲ್ಲು. ಜೈಲಿಗೆ ಇಂಗ್ ಹೋಗಿ ಹಂಗ್ ಬರ್ತೀನಿ ನೋಡ್ತಿರಿ ಅಂತ ತೋರಿಸೋದು’.
‘ಹಂಗಾರೆ ಈ ಬೇಲ್ ಮೆರವಣಿಗಿನೂ ಹಂಗೇ ಅನ್ನು. ಚನ್ನಗಿರೀಲಿ ಕೋಟಿಗಟ್ಲೆ ರೊಕ್ಕ ಬಿಡೋ ಅಡಿಕೆ ಗಿಡ ಸಿಗ್ತಾವಂತೆ? ಹೆಂಗೂ ಹೋಗಿದ್ಯಲ್ಲ, ಒಂದ್ ನಾಕು ತಂದಿದ್ರೆ ನಾವೂ ನೆಡಬೋದಿತ್ತೇನಪ’.
‘ತರಬೋದಿತ್ತು, ಆದ್ರೆ ಅವು ಅಟಾಕಂದು ರೊಕ್ಕ ಬಿಟ್ರೆ ಯಾವನು ಎಣಿಸ್ತಾನೆ ಅಂತ ತರ್ಲಿಲ್ಲ ಕಣಲೆ’ ಗುಡ್ಡೆ ನಕ್ಕ.
‘ಬರೀ ಇಂಥವೇ ನಿನ್ ಮಾತು. ಹೋಗ್ಲಿ ಮಂಡಕ್ಕಿ ಮೆಣ್ಸಿನ್‌ಕಾಯಿ, ಚಾ ಹೇಳು’ ದುಬ್ಬೀರ ಕೇಳಿದ.
‘ನನ್ನತ್ರ ರೊಕ್ಕಿಲ್ಲಲೆ, ತೆಪರೇಸಿ ಇದ್ರೆ ಕೊಡಿಸ್ತಿದ್ದ, ಯಾಕೆ ತೆಪರ ಇವತ್ ಕಾಣ್ತಿಲ್ಲ?’
‘ಅವನೂ ನಿನ್ ತರಾನೇ... ಬೆಳಗ್ಗಿಂದ ಆಫೀಸ್ ಬಾಗಿಲು ತೆಕ್ಕಂಡ್ ಕುಂತಿರಬೇಕು’.
‘ಆಫೀಸ್ ಬಾಗಿಲು ತೆಕ್ಕಂಡ್ ಕುಂತಿದಾನಾ? ಯಾಕೆ?’
‘ಅಕಸ್ಮಾತ್ ಯಾವನಾದ್ರು ರೊಕ್ಕದ ಚೀಲ ತಂದಿಟ್ಟು ಓಡಿಹೋಗಬಹುದು, ಲಕ್ ಹೊಡೆದ್ರೆ ಯಾಕ್ ಬಿಡಬೇಕು ಅಂತ’.
ದುಬ್ಬೀರನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.