‘ಅಂತೂ ಚುನಾವಣಾ ಪರ್ವ ಮುಗಿದಂತಾಯ್ತು... ನಿನ್ನೆ ವೋಟು ಹಾಕಿದೆಯೇನೋ? ಬೂತ್ ಲಿಸ್ಟ್‌ನಲ್ಲಿ ನಿನ್ನ ಹೆಸರು ಇದೆಯೋ ಇಲ್ಲವೋ ಚೆಕ್ ಮಾಡಿಸಬೇಕೂಂತಿದ್ದೆ’ ಚೆಡ್ಡಿ ದೋಸ್ತ್‌ನನ್ನು ಕೇಳಿದೆ.
‘ನೋಡಿಲ್ಲಿ’ ಎಂದು ಎಡಗೈ ತೋರು ಬೆರಳ ತುದಿಯ ಕಪ್ಪು ಗೆರೆ ತೋರಿಸಿದ.
‘ನಾನು ಪೋಲಿಂಗ್ ಬೂತಿಗೆ ಬಂದಾಗ ನೀನು ಕಾಣಿಸಲಿಲ್ವಲ್ಲಯ್ಯಾ... ಅಂದ್ರೆ, ಅದೇ ಟೈಮಿಗೆ ನಮ್ಮ ಸೂಪರ್ ಸ್ಟಾರ್ ಹೀರೊಯಿನ್ ವೋಟ್ ಹಾಕಲು ಬಂದಿದ್ದರಿಂದ ಭಾಳ ಗದ್ದಲವಿತ್ತೂನ್ನು’.
‘ನಾನು ಬೆಳಗ್ಗೆ ಏಳಕ್ಕೆ ಸರಿಯಾಗಿ ಹೋಗಿದ್ದೆನಪ್ಪಾ... ಮತಗಟ್ಟೆ ಮುಂದೆ ತಗೊಂಡಿದ್ದ ನನ್ನ ಸೆಲ್ಫಿ ಟೀವೀಲಿ ಬಂತು, ನೋಡಲಿಲ್ವೇ?’
‘ಇಲ್ಲವಯ್ಯಾ... ಯಾಕೋ ಅಷ್ಟು ಬೇಗ ಹೋಗಿದ್ದೆ? ನಿನ್ನನ್ನ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಕರೆದಿದ್ರಾ?’
‘ಹಾಗಲ್ಲ, ಪೇಪರ್ ನೋಡಲಿಲ್ವೇ? ವೋಟು ಮಾಡಿದ್ದಕ್ಕೆ ಬೆರಳ ಗುರುತು ತೋರಿಸಿದೋರಿಗೆ ಫ್ರೀ ಬೆಣ್ಣೆ ದೋಸೆ ಅಂತಿರಲಿಲ್ವಾ? ನಾನು ಡಬಲ್ ದೋಸೆ ತಿಂದು, ಬೈಕ್‌ಗೆ ಫ್ರೀ ಪೆಟ್ರೋಲ್ ಹಾಕಿಸ್ಕೊಂಡು...’
‘ಫ್ರೀ ಪೆಟ್ರೋಲು?!’
‘ಹೌದಪ್ಪಾ, ಒಂದು ಬಂಕ್‌ನವರು ಮತ ಹಾಕಿದೋರಿಗೆ ಉಚಿತವಾಗಿ ಪೆಟ್ರೋಲ್ ಕೊಟ್ರು. ಹಾಕಿಸ್ಕೊಂಡು ಜೂಮ್ ಅಂತ ನಂದಿ ಬೆಟ್ಟಕ್ಕೆ ಹೋದ್ರೆ ‘ಕ್ಲೋಸ್ಡ್’ ಅಂತ ಬೋರ್ಡ್ ಹಾಕಿದ್ರು!’
‘ತೆಪರೆ, ಎಲೆಕ್ಷನ್ ದಿನ ಬೆಟ್ಟಕ್ಕೆ ಪ್ರವೇಶವಿಲ್ಲಾಂತ ಮೊದಲೇ ಅನೌನ್ಸ್ ಮಾಡಿದ್ರಲ್ಲೋ. ಅದ್ಸರಿ, ವೋಟರ್ಸ್ ಲಿಸ್ಟಲ್ಲಿ ನಿನ್ನ ಹೆಸರು ಇತ್ತೇ?’
‘ಇಲ್ಲದಿದ್ರೇನಂತೆ! ಬೆರಳಿಗೆ ಕಪ್ಪು ಶಾಯಿ ಹಾಕಿಕೊಳ್ಳಲು ಬರೋಲ್ವೆ?’
‘ಭೇಷ್! ಮುಂದಿನ ಅಸೆಂಬ್ಲಿ ಚುನಾವಣೆಗೆ ನಿನಗೆ ಖಂಡಿತ ಟಿಕೆಟ್ ಸಿಗುತ್ತೆ’.
‘ನಿನ್ನ ಶುಭ ಭವಿಷ್ಯವಾಣಿಗಾಗಿ ಹಾರ್ದಿಕ ಧನ್ಯವಾದಗಳು. ನಿನ್ನ ಬಾಯಿ ಹರಕೆ ಫಲಿಸಲಿ. ನಾನಿನ್ನು ಬರ್ತೀನಿ, ಅಲ್ಲಿ ವೋಟು ಹಾಕಿದ ಗುರುತು ತೋರಿಸಿದವರಿಗೆ ಉಚಿತ ಅಕ್ಕಿ, ಬೇಳೆ ಕೊಡ್ತಾರಂತೆ’.
ನನ್ನ ತೆರೆದ ಬಾಯಿ ಮುಚ್ಚಲಿಲ್ಲ. ನನ್ನ ಕೈ ಬೆರಳ ತುದಿಯ ಕಪ್ಪು ಅಗಲವಾದಂತೆ ಭಾಸವಾಗತೊಡಗಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.